ಅಲೋಪತಿ ವಿರುದ್ಧ ರಾಮ್ ದೇವ್ ಹೇಳಿಕೆ: ವೈದ್ಯರ ಒಕ್ಕೂಟದಿಂದ ಜೂ.1ರಂದು ರಾಷ್ಟ್ರ ವ್ಯಾಪಿ ಪ್ರತಿಭಟನೆ

ತಿರುವನಂತಪುರ, ಮೇ 30: ಯೋಗ ಗುರು ರಾಮ್ ದೇವ್ ಅವರು ಅಲೋಪತಿ ಬಗ್ಗೆ ನೀಡಿರುವ ಹೇಳಿಕೆ ಕುರಿತಂತೆ ಅಸಮಾಧಾನಗೊಂಡಿರುವ ನಿವಾಸಿ ವೈದ್ಯರ ಸಂಘಟನೆಗಳ ಒಕ್ಕೂಟ, ನಾವು ಜೂನ್ 1ರಂದು ಪ್ರತಿಭಟನೆ ನಡೆಸಲಿದ್ದೇವೆ ಹಾಗೂ ಅಂದು ಕರಾಳ ದಿನ ಆಚರಿಸಲಿದ್ದೇವೆ ಎಂದು ಶನಿವಾರ ಹೇಳಿದೆ.
ಅಲೋಪತಿ ವಿರುದ್ಧದ ಹೇಳಿಕೆಗಾಗಿ ರಾಮ್ ದೇವ್ ಅವರು ನಿಶ್ಯರ್ತವಾಗಿ ಸಾರ್ವಜನಿಕ ಕ್ಷಮೆ ಯಾಚಿಸಬೇಕು ಎಂದು ಒಕ್ಕೂಟ ಹೇಳಿಕೆಯಲ್ಲಿ ಆಗ್ರಹಿಸಿದೆ.
ಟ್ವೀಟ್ ನಲ್ಲಿ ಭಾರತೀಯ ನಿವಾಸಿ ವೈದ್ಯರ ಸಂಘಟನೆಗಳ ಒಕ್ಕೂಟ, ರಾಮ್ ದೇವ್ ಅವರ ಹೇಳಿಕೆ ಬಗ್ಗೆ ಆಕ್ಷೇಪ ವ್ಯಕ್ತವಾದ ಬಳಿಕವೂ ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಆದುದರಿಂದ ಆರೋಗ್ಯ ಸೇವೆಗೆ ಅಡ್ಡಿ ಉಂಟಾಗದಂತೆ ಜೂನ್ 1ನ್ನು ರಾಷ್ಟ್ರಾದ್ಯಂತ ಕರಾಳ ದಿನವನ್ನಾಗಿ ಆಚರಿಸಲಾಗುವುದು ಎಂದು ಹೇಳಿದೆ.
‘‘ ರಾಮ್ ದೇವ್ ಅವರು ನಿಶ್ಯರ್ತವಾಗಿ ಸಾರ್ವಜನಿಕ ಕ್ಷಮೆ ಕೋರುವಂತೆ ಅಥವಾ ಅವರ ವಿರುದ್ಧ ಸಾಂಕ್ರಾಮಿಕ ರೋಗಗಳ ಕಾಯ್ದೆ, 1897ರ ಸಂಬಂಧಿತ ಕಲಂ ಅಡಿಯಲ್ಲಿ ಕ್ರಮ ಕೈಗೊಳ್ಳುವಂತೆ ನಾವು ಆಗ್ರಹಿಸುತ್ತೇವೆ’’ ಎಂದು ಹೇಳಿಕೆ ತಿಳಿಸಿದೆ.
ರಾಮ್ದೇವ್ ಅವರ ಹೇಳಿಕೆ ಲಸಿಕೆ ತೆಗೆದುಕೊಳ್ಳಲು ಜನರು ಹಿಂಜರಿಯಲು ಕಾರಣವಾಗಿದೆ ಎಂದು ಕೂಡ ಅದು ಆರೋಪಿಸಿದೆ.
ಕೊರೋನ ವೈರಸ್ ಸೋಂಕಿನ ಚಿಕಿತ್ಸೆಗೆ ಬಳಸುವ ಕೆಲವು ಔಷಧಗಳನ್ನು ಪ್ರಶ್ನಿಸುವ ಹಾಗೂ ‘‘ಕೋವಿಡ್-19ಕ್ಕೆ ಅಲೋಪತಿ ಔಷಧ ತೆಗೆದುಕೊಂಡ ಲಕ್ಷಾಂತರ ಜನರು ಸಾವನ್ನಪ್ಪಿದ್ದಾರೆ’’ ಎಂದು ಹೇಳುವ ರಾಮ್ ದೇವ್ ಅವರ ವೀಡಿಯೊ ತುಣುಕು ಕೆಲವು ದಿನಗಳ ಹಿಂದೆ ವೈರಲ್ ಆದ ಬಳಿಕ ವಿವಾದ ಉಂಟಾಗಿತ್ತು.







