ಭಾರತದಿಂದ ಡೋಮಿನಿಕಕ್ಕೆ ಚೋಕ್ಸಿ ಗಡಿಪಾರು ದಾಖಲೆಗಳು ರವಾನೆ: ಆ್ಯಂಟಿಗ ಮತ್ತು ಬಾರ್ಬುಡ ಪ್ರಧಾನಿ ಗ್ಯಾಸ್ಟನ್ ಬ್ರೌನ್

ಸೇಂಟ್ ಜೋನ್ಸ್ (ಆ್ಯಂಟಿಗ ಮತ್ತು ಬಾರ್ಬುಡ), ಮೇ 30: ಭಾರತದ ಬ್ಯಾಂಕ್ ಗಳಿಗೆ 14,000 ಕೋಟಿ ರೂಪಾಯಿ ವಂಚಿಸಿ ಪರಾರಿಯಾಗಿರುವ ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿಯ ಗಡಿಪಾರಿಗೆ ಸಂಬಂಧಿಸಿದ ದಾಖಲೆಗಳನ್ನು ಭಾರತ ಡೋಮಿನಿಕ ದೇಶಕ್ಕೆ ರವಾನಿಸಿದೆ ಎಂದು ಆ್ಯಂಟಿಗ ಮತ್ತು ಬಾರ್ಬುಡ ದೇಶದ ಪ್ರಧಾನಿ ಗ್ಯಾಸ್ಟನ್ ಬ್ರೌನ್ ಹೇಳಿದ್ದಾರೆ.
ಶನಿವಾರ ಸ್ಥಳೀಯ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದಾಖಲೆ ಪತ್ರಗಳನ್ನು ಹೊತ್ತು ಮೇ 28ರಂದು ಖಾಸಗಿ ವಿಮಾನವೊಂದು ಡೋಮಿನಿಕಕ್ಕೆ ಆಗಮಿಸಿದೆ ಎಂದು ಹೇಳಿದರು.
ಮೆಹುಲ್ ಚೋಕ್ಸಿಯು ಭಾರತದಲ್ಲಿ ನಿಜವಾಗಿಯೂ ವಿಚಾರಣೆಗೆ ಬೇಕಾದ ವ್ಯಕ್ತಿ ಎನ್ನುವುದನ್ನು ಖಚಿತಪಡಿಸುವುದಕ್ಕಾಗಿ ಭಾರತ ಸರಕಾರವು ಆ ದೇಶದ ನ್ಯಾಯಾಲಯಗಳ ಕೆಲವು ದಾಖಲೆ ಪತ್ರಗಳನ್ನು ಡೋಮಿನಿಕಕ್ಕೆ ಕಳುಹಿಸಿದೆ ಎನ್ನುವುದು ನನ್ನ ತಿಳುವಳಿಕೆಯಾಗಿದೆ. ಬುಧವಾರ ನಡೆಯಲಿರುವ ನ್ಯಾಯಾಲಯ ವಿಚಾರಣೆಯ ವೇಳೆ ಆ ದಾಖಲೆಗಳನ್ನು ಬಳಸಲಾಗುವುದು ಎನ್ನುವುದೂ ನನ್ನ ತಿಳುವಳಿಕೆಯಾಗಿದೆ ಎಂದು ಬ್ರೌನ್ ಆ್ಯಂಟಿಗ ನ್ಯೂಸ್ ರೂಮ್ ಸುದ್ದಿಸಂಸ್ಥೆಗೆ ತಿಳಿಸಿದರು.
ಚೋಕ್ಸಿಯನ್ನು ಭಾರತಕ್ಕೆ ಗಡಿಪಾರು ಮಾಡಿಸಿಕೊಳ್ಳಲು ಭಾರತ ಸರಕಾರವು ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತಿರುವಂತೆ ಕಂಡುಬರುತ್ತಿದೆಎಂದರು.
62 ವರ್ಷದ ಚೋಕ್ಸಿಗೆ ಆ್ಯಂಟಿಗ ಮತ್ತು ಬಾರ್ಬುಡ ದೇಶದ ಪೌರತ್ವ ಲಭಿಸಿದ ಬಳಿಕ 2018ರಿಂದ ಆ ದೇಶದಲ್ಲಿ ವಾಸಿಸುತ್ತಿದ್ದರು. ಇತ್ತೀಚೆಗೆ ಆ್ಯಂಟಿಗದಿಂದ ತಪ್ಪಿಸಿಕೊಂಡು ಕ್ಯೂಬಾಕ್ಕೆ ಹೋಗುವ ಪ್ರಯತ್ನದ ಭಾಗವಾಗಿ ನೆರೆಯ ದ್ವೀಪ ದೇಶ ಡೋಮಿನಿಕಕ್ಕೆ ದೋಣಿಯ ಮೂಲಕ ಹೋಗಿದ್ದಾಗ ಅಲ್ಲಿ ಅವರನ್ನು ಬಂಧಿಸಲಾಗಿದೆ ಎನ್ನಲಾಗಿದೆ. ಅಲ್ಲಿಂದ ಅವರನ್ನು ನೇರವಾಗಿ ಭಾರತಕ್ಕೆ ಕಳುಹಿಸಲು ಪ್ರಯತ್ನಗಳು ನಡೆಯುತ್ತಿವೆ.
ಚೋಕ್ಸಿ ಪರಾರಿಯಿಂದ ಗಡಿಪಾರು ಮೊಕದ್ದಮೆ ಸುಲಭವಾಯಿತು: ಭಾರತೀಯ ಗುಪ್ತಚರ ಸಂಸ್ಥೆ
ಮೆಹುಲ್ ಚೋಕ್ಸಿ ಆ್ಯಂಟಿಗ ಮತ್ತು ಬಾರ್ಬುಡ ದೇಶದಿಂದ ನೆರೆಯ ಡೋಮಿನಿಕ ದೇಶಕ್ಕೆ ಪರಾರಿಯಾಗಿರುವುದರಿಂದ ಅವರ ಗಡಿಪಾರು ತುಂಬಾ ಸುಲಭವಾಗಿದೆ ಎಂದು ಭಾರತೀಯ ಗುಪ್ತಚರ ಸಂಸ್ಥೆಯ ಮೂಲಗಳು ಹೇಳಿವೆ.
ಮೆಹುಲ್ ಚೋಕ್ಸಿ ವೈಯಕ್ತಿಕ ಕಾರಣಗಳಿಗಾಗಿ ಡೋಮಿನಿಕಕ್ಕೆ ಹೋಗಿದ್ದಾರೆ. ಅದರಲ್ಲಿ ಗುಪ್ತಚರ ಸಂಸ್ಥೆಗಳ ಪಾತ್ರವಿಲ್ಲ. ಭಾರತೀಯ ಗುಪ್ತಚರ ಸಂಸ್ಥೆಗಳು ಅವರನ್ನು ಅಪಹರಿಸಿವೆ ಎನ್ನುವ ಆರೋಪಗಳು ಆಧಾರರಹಿತ. ಚೋಕ್ಸಿ ತನ್ನ ದೇಶಕ್ಕೆ ಕಾನೂನುಬಾಹಿರವಾಗಿ ಪ್ರವೇಶಿಸಿದ್ದಾರೆ ಎಂದು ಡೋಮಿನಿಕ ಮೊಕದ್ದಮೆ ದಾಖಲಿಸಿರುವುದರಿಂದ ನಮ್ಮ ಮೊಕದ್ದಮೆ ಈಗ ತುಂಬಾ ಸುಲಭವಾಗಿದೆಎಂದು ಭಾರತೀಯ ಗುಪ್ತಚರ ಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದರು.
ಆ್ಯಂಟಿಗಕ್ಕೆ ಮರಳಿದರೆ ಗಡಿಪಾರು ಕಷ್ಟ: ಪ್ರಧಾನಿ
ಮೆಹುಲ್ ಚೋಕ್ಸಿ ಡೋಮಿನಿಕಕ್ಕೆ ಪರಾರಿಯಾಗುವ ಮೂಲಕ ಭಾರೀ ಪ್ರಮಾದವೊಂದನ್ನು ಮಾಡಿದ್ದಾರೆ ಹಾಗೂ ಅವರನ್ನು ತಕ್ಷಣ ಭಾರತಕ್ಕೆ ಗಡಿಪಾರು ಮಾಡಬೇಕು ಎಂಬುದಾಗಿ ಕಳೆದ ವಾರ ಅವರು ಡೋಮಿನಿಕದಲ್ಲಿ ಬಂಧನಕ್ಕೊಳಗಾದ ಬಳಿಕ ಆ್ಯಂಟಿಗ ಮತ್ತು ಬಾರ್ಬುಡ ಪ್ರಧಾನಿ ಗ್ಯಾಸ್ಟನ್ ಬೌನ್ ಹೇಳಿದ್ದರು.
ನಾವು ಅವರನ್ನು ಮರಳಿ ಸ್ವೀಕರಿಸುವುದಿಲ್ಲಎಂದು ಅವರು ಹೇಳಿದ್ದರು ಎಂದು ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿತ್ತು. ಒಂದು ವೇಳೆ, ಚೊಕ್ಸಿ ಆ್ಯಂಟಿಗಕ್ಕೆ ಗಡಿಪಾರು ಆದರೆ, ಅವರಿಗೆ ದೇಶದ ನಾಗರಿಕರಿಗೆ ಸಿಗುವ ಕಾನೂನು ಮತ್ತು ಸಾಂವಿಧಾನಿಕ ರಕ್ಷಣೆಗಳು ಮರಳಿ ದೊರೆಯುತ್ತವೆಎಂದು ಅವರು ಹೇಳಿರುವುದಾಗಿ ಎಎನ್ಐ ಶನಿವಾರ ವರದಿ ಮಾಡಿದೆ.
ಈ ಪ್ರಕರಣದಲ್ಲಿ ನ್ಯಾಯಾಲಯದ ಕಾರ್ಯವ್ಯಾಪ್ತಿಯನ್ನು ನಾವು ಗೌರವಿಸುತ್ತೇವೆ. ಚೋಕ್ಸಿಯನ್ನು ಭಾರತಕ್ಕೆ ನೇರವಾಗಿ ಗಡಿಪಾರು ಮಾಡುವಂತೆ ನಮ್ಮ ದೇಶದ ಪರವಾಗಿ ಡೋಮಿನಿಕಕ್ಕೆ ನಾನು ಮಾಡಿರುವ ಮನವಿಯು ಪರಿಪೂರ್ಣವಾಗಿ ಸ್ವೀಕಾರಾರ್ಹವಾಗಿದೆ. ಇದು ದೇಶಭ್ರಷ್ಟ ವ್ಯಕ್ತಿಯೊಬ್ಬನನ್ನು ಬಂಧಿಸುವ ನಿಟ್ಟಿನಲ್ಲಿ ಸರಕಾರವೊಂದು ನೀಡುತ್ತಿರುವ ಸಹಕಾರವಾಗಿದೆಎಂದು ಬ್ರೌನ್ ಹೇಳಿದ್ದಾರೆ.
ಆ್ಯಂಟಿಗದಲ್ಲಿನ ನ್ಯಾಯಾಲಯವೊಂದು ಮೆಹುಲ್ ಚೋಕ್ಸಿಯನ್ನು ಭಾರತಕ್ಕೆ ಗಡಿಪಾರು ಮಾಡುವ ಪ್ರಸ್ತಾವಕ್ಕೆ ತಡೆಯಾಜ್ಞೆ ನೀಡಿದೆ. ಚೋಕ್ಸಿ ಈಗ ಭಾರತದ ಪ್ರಜೆಯಲ್ಲದಿರುವುದರಿಂದ ಅವರನ್ನು ಭಾರತಕ್ಕೆ ಗಡಿಪಾರು ಮಾಡಲು ಸಾಧ್ಯವಿಲ್ಲ ಎಂಬುದಾಗಿ ಅವರ ವಕೀಲರು ವಾದಿಸಿದ ಬಳಿಕ ನ್ಯಾಯಾಲಯ ಈ ತೀರ್ಮಾನಕ್ಕೆ ಬಂದಿದೆ.
ಚುನಾವಣಾ ನಿಧಿಗಾಗಿ ಪ್ರತಿಪಕ್ಷದಿಂದ ಚೊಕ್ಸಿಗೆ ಬೆಂಬಲ: ಪ್ರಧಾನಿ ಬ್ರೌನ್ ಆರೋಪ
ನಮ್ಮ ದೇಶದ ಪ್ರತಿಪಕ್ಷ ಯುನೈಟೆಡ್ ಪ್ರೊಗ್ರೆಸಿವ್ ಪಾರ್ಟಿ (ಯುಪಿಪಿ)ಯು ಚುನಾವಣಾ ನಿಧಿಗೆ ಹಣ ಪಡೆಯುವ ಉದ್ದೇಶದಿಂದ ದೇಶಭ್ರಷ್ಟ ಭಾರತೀಯ ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿಯನ್ನು ಬೆಂಬಲಿಸುತ್ತಿದೆ ಎಂದು ಆ್ಯಂಟಿಗ ಮತ್ತು ಬಾರ್ಬುಡ ದೇಶದ ಪ್ರಧಾನಿ ಗ್ಯಾಸ್ಟನ್ ಬ್ರೌನ್ ಶನಿವಾರ ಆರೋಪಿಸಿದ್ದಾರೆ.
ನನ್ನ ಸರಕಾರ ಮೆಹುಲ್ ಚೋಕ್ಸಿಗೆ ರಕ್ಷಣೆ ನೀಡುತ್ತಿದೆ ಎಂಬುದಾಗಿ ದುರುದ್ದೇಶಪೂರ್ವಕವಾಗಿ ಆರೋಪಿಸಿರುವ ಪ್ರತಿಪಕ್ಷಗಳು, ಈಗ ಅದೇ ವ್ಯಕ್ತಿಯ ರಕ್ಷಣೆಗೆ ಮುಂದಾಗಿವೆ. ಚುನಾವಣಾ ನಿಧಿಗೆ ಹಣ ಪಡೆಯುವುದಕ್ಕಾಗಿ ಅವುಗಳು ಈ ಕೆಲಸ ಮಾಡುತ್ತಿವೆಎಂದು ಅವರು ಹೇಳಿದ್ದಾರೆ.







