ಏಶ್ಯನ್ ಬಾಕ್ಸಿಂಗ್ ಚಾಂಪಿಯನ್ ಶಿಪ್: ಪೂಜಾ ರಾಣಿಗೆ ಚಿನ್ನ, ಬೆಳ್ಳಿಗೆ ತೃಪ್ತಿಪಟ್ಟ ಮೇರಿಕೋಮ್
ದುಬೈ: ಹಾಲಿ ಚಾಂಪಿಯನ್ ಪೂಜಾ ರಾಣಿ(75 ಕೆಜಿ)ಏಶ್ಯನ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿಸತತ ಎರಡನೇ ಬಾರಿ ಚಿನ್ನದ ಪದಕವನ್ನು ಜಯಿಸಿ ಗಮನ ಸೆಳೆದರೆ, ಹಿರಿಯ ಬಾಕ್ಸರ್ ಎಂಸಿ ಮೇರಿಕೋಮ್ (51ಕೆಜಿ)ಫೈನಲ್ ನಲ್ಲಿ ಎಡವುದರೊಂದಿಗೆ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು.
ರವಿವಾರ ನಡೆದ ಪಂದ್ಯದಲ್ಲಿ ಪೂಜಾ(75 ಕೆಜಿ) ಉಜ್ಬೇಕಿಸ್ತಾನದ ಮಾವ್ಲುಡಾ ಮೊವ್ಲೋನೊವಾ ಅವರನ್ನು ಸೋಲಿಸಿ ಚಿನ್ನದ ಪದಕಕ್ಕೆ ಮುತ್ತಿಟ್ಟರು. ತನ್ನ ಅಮೋಘ ಪ್ರದರ್ಶನಕ್ಕಾಗಿ 10,000 ಯುಎಸ್ ಡಾಲರ್ ಬಹುಮಾನ ಪಡೆದರು.
ಆದರೆ ಆರು ಬಾರಿಯ ವಿಶ್ವ ಚಾಂಪಿಯನ್ ಮೇರಿ ಕೋಮ್ ಹಾಗೂ ಚೊಚ್ಚಲ ಟೂರ್ನಿಯನ್ನು ಆಡಿದ್ದ ಲಾಲ್ಬುಟ್ಸೈಹಿ (64 ಕೆಜಿ) ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು.
ಒಲಿಂಪಿಕ್ ಗೆ ಅರ್ಹತೆ ಪಡೆದಿರುವ ಮೇರಿ ಕೋಮ್ ಕಝಕಿಸ್ತಾನದ ನಾಝಿಮ್ ಕಿಝೈಬೇ ವಿರುದ್ಧ 2-3 ತೀರ್ಪಿನಲ್ಲಿ ಸೋತಿದ್ದಾರೆ. ಮಣಿಪುರಿ ಸೂಪರ್ ಸ್ಟಾರ್ ಪಂದ್ಯಾವಳಿಯಲ್ಲಿ ಏಳನೇ ಪದಕ ಜಯಿಸಿದರು. 2003 ರ ಆವೃತ್ತಿಯಲ್ಲಿ ಚಿನ್ನದ ಪದಕ ಗೆದ್ದಿದ್ದರು. ಈ ಟೂರ್ನಮೆಂಟ್ ನಲ್ಲಿ ಈ ತನಕ ಐದು ಚಿನ್ನ ಹಾಗೂ ಎರಡು ಬೆಳ್ಳಿ ಪದಕಗಳನ್ನು ಜಯಿಸಿದ್ದಾರೆ.
ಲಾಲ್ಬುತ್ಸೈಹಿ ಕಝಕ್ ಪ್ರತಿಸ್ಪರ್ಧಿ ಮಿಲಾನಾ ಸಫ್ರೊನೊವಾ ಅವರ ವಿರುದ್ಧ 2-3 ಅಂತರದಿಂದ ಸೋತಿದ್ದಾರೆ.