ಮದುವೆ ಸಮಾರಂಭದ ಮೇಲೆ ತಾಲಿಬಾನ್ ಬಾಂಬ್: 6 ಬಲಿ
ಕಾಬೂಲ್ (ಅಫ್ಘಾನಿಸ್ತಾನ), ಮೇ 30: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ನ ಉತ್ತರಕ್ಕಿರುವ ಪ್ರಾಂತವೊಂದರಲ್ಲಿ ನಡೆದ ಮದುವೆ ಸಮಾರಂಭವೊಂದರ ಮೇಲೆ ತಾಲಿಬಾನಿ ಉಗ್ರರು ನಡೆಸಿದ ಮೋರ್ಟರ್ ಬಾಂಬ್ ದಾಳಿಯಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ ಆರು ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ರವಿವಾರ ತಿಳಿಸಿದ್ದಾರೆ.
ದಾಳಿಯು ಶನಿವಾರ ರಾತ್ರಿ ಕಪಿಸ ಪ್ರಾಂತದಲ್ಲಿ ನಡೆದಿದೆ. ಸೇನಾ ಚೆಕ್ ಪಾಯಿಂಟ್ ನತ್ತ ಗುರಿ ಇರಿಸಲಾಗಿದ್ದ ಶೆಲ್ ನೇರವಾಗಿ ಮದುವೆ ನಡೆಯುತ್ತಿದ್ದ ಮನೆಯ ಮೇಲೆ ಅಪ್ಪಳಿಸಿತು. ಮದುವೆಯಲ್ಲಿ ಭಾಗವಹಿಸುವುದಕ್ಕಾಗಿ ಮನೆಯಲ್ಲಿ ಜನರು ಒಟ್ಟು ಸೇರಿದ್ದರು ಎಂದು ಅಧಿಕಾರಿಗಳು ತಿಳಿಸಿದರು.
‘‘ಕಪಿಸ ಪ್ರಾಂತದಲ್ಲಿ ತಾಲಿಬಾನ್ ಭಯೋತ್ಪಾದಕರ ರಾಕೆಟೊಂದು ಮದುವೆ ಮನೆಯೊಂದರ ಮೇಲೆ ಅಪ್ಪಳಿಸಿದಾಗ ಆರು ನಾಗರಿಕರು ಮೃತಪಟ್ಟಿದ್ದಾರೆ ಮತ್ತು ನಾಲ್ವರು ಗಾಯಗೊಂಡಿದ್ದಾರೆ’’ ಎಂದು ಅಫ್ಘಾನಿಸ್ತಾನದ ರಕ್ಷಣಾ ಸಚಿವಾಲಯದ ವಕ್ತಾರ ಫಾವದ್ ಅಮನ್ ಟ್ವಿಟರ್ ನಲ್ಲಿ ಹೇಳಿದ್ದಾರೆ.
Next Story





