ಅಸ್ಸಾಂ: ಕೊರೋನ ಪರೀಕ್ಷೆ ಮುಗಿಸಿ ಹಿಂತಿರುಗುತ್ತಿದ್ದ ಮಹಿಳೆಯ ಮೇಲೆ ಇಬ್ಬರಿಂದ ಅತ್ಯಾಚಾರ

ಗುವಾಹಟಿ, ಮೇ 30: ಆಸ್ಪತ್ರೆಯಲ್ಲಿ ಕೊರೋನ ಸೋಂಕು ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದ ಬಳಿಕ ಮನೆಗೆ ಹಿಂತಿರುಗುತ್ತಿದ್ದ ಮಹಿಳೆಯೊಬ್ಬರ ಮೇಲೆ ಇಬ್ಬರು ದುಷ್ಕರ್ಮಿಗಳು ಅತ್ಯಾಚಾರ ಎಸಗಿರುವುದಾಗಿ ಆರೋಪಿಸಲಾಗಿದೆ.
ಅಸ್ಸಾಂನ ಚರೈಡಿಯೊ ಜಿಲ್ಲೆಯ ಬೊರ್ಹಾಟ್ ಚಹಾ ತೋಟದ ಬಳಿ ಈ ಘಟನೆ ನಡೆದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಬೊರ್ಹಟ್ ನಾಗಮಾತಿ ಪ್ರದೇಶದಲ್ಲಿ ವಾಸಿಸುತ್ತಿದ್ದ ಕುಟುಂಬದ ಸದಸ್ಯರಿಗೆ ಕೊರೋನ ಸೋಂಕು ದೃಢಪಟ್ಟ ಬಳಿಕ ಪತಿ, ಪತ್ನಿ ಮತ್ತು ಮಗಳು ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಪಡೆದ ಬಳಿಕ ನೆಗೆಟಿವ್ ವರದಿ ಬಂದ ಕಾರಣ ಶುಕ್ರವಾರ ಪತಿಯನ್ನು ಆಸ್ಪತ್ರೆಯಿಂದ ಡಿಜ್ಚಾರ್ಜ್ ಮಾಡಲಾಗಿದೆ.
ಶನಿವಾರ ಪತ್ನಿ ಮತ್ತು ಮಗಳ ವರದಿಯೂ ನೆಗೆಟಿವ್ ಬಂದದ್ದರಿಂದ ಅವರಿಬ್ಬರನ್ನೂ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ. ಆದರೆ ಕರ್ಫ್ಯೂ ಜಾರಿಯಲ್ಲಿರುವುದರಿಂದ 25 ಕಿ.ಮೀ ದೂರದಲ್ಲಿರುವ ಮನೆಗೆ ತೆರಳಲು ವಾಹನದ ವ್ಯವಸ್ಥೆ ಮಾಡುವಂತೆ ಮಹಿಳೆ ಮಾಡಿಕೊಂಡ ಮನವಿಯನ್ನು ಆಸ್ಪತ್ರೆಯವರು ನಿರಾಕರಿಸಿದ್ದಾರೆ ಎನ್ನಲಾಗಿದೆ.
ಇದರಿಂದ ಮಹಿಳೆ ಮತ್ತವಳ ಮಗಳು ಕಾಲ್ನಡಿಗೆಯಲ್ಲಿ ಮನೆಗೆ ಹೊರಟಿದ್ದಾರೆ. ರಾತ್ರಿ 7 ಗಂಟೆ ವೇಳೆಗೆ ಧುದಾರಿ ಎಂಬಲ್ಲಿಗೆ ತಲುಪಿದ್ದಾಗ , ದುಷ್ಕರ್ಮಿಗಳು ಹಿಂಬಾಲಿಸಿಕೊಂಡು ಬಂದಿದ್ದಾರೆ. ಮಗಳು ಓಡಿ ತಪ್ಪಿಸಿಕೊಂಡರೂ ಮಹಿಳೆ ಅವರಿಗೆ ಸಿಕ್ಕಿಬಿದ್ದಿದ್ದು , ಇಬ್ಬರು ಅತ್ಯಾಚಾರ ಎಸಗಿದ್ದಾರೆ. ಅಲ್ಲಿಂದ ತಪ್ಪಿಸಿಕೊಂಡಿದ್ದ ಮಗಳು ಸಮೀಪದಲ್ಲಿದ್ದ ಗ್ರಾಮಕ್ಕೆ ತೆರಳಿ ಮಾಹಿತಿ ನೀಡಿದ್ದು ಅವರು ಪೊಲೀಸರೊಂದಿಗೆ ಸ್ಥಳಕ್ಕೆ ಆಗಮಿಸಿ ಗಂಭೀರ ಪರಿಸ್ಥಿತಿಯಲ್ಲಿದ್ದ ಮಹಿಳೆಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಈ ಘಟನೆಗೆ ಆಸ್ಪತ್ರೆಯವರ ನಿರ್ಲಕ್ಷ್ಯ ಕಾರಣ. ಇಡೀ ವಿಶ್ವವೇ ಕೊರೋನ ಸೋಂಕಿನ ಸಮಸ್ಯೆಯಲ್ಲಿರುವಾಗ ಆಸ್ಪತ್ರೆಯವರು ಮಹಿಳೆ ಮತ್ತವಳ ಮಗಳಿಗೆ ಸಹಾಯ ಮಾಡಬೇಕಿತ್ತು. ಈ ಬಗ್ಗೆ ತನಿಖೆ ನಡೆದು ತಪ್ಪಿತಸ್ತರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ಶಾಸಕ ಧರ್ಮೇಶ್ವರ್ ಕೊನ್ವರ್ ಆಗ್ರಹಿಸಿದ್ದಾರೆ.
ದುಷ್ಕರ್ಮಿಗಳನ್ನು ಶೀಘ್ರ ಬಂಧಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.







