ಮೆಹುಲ್ ಚೋಕ್ಸಿ ಭಾರತೀಯ ಪ್ರಜೆ ಅಲ್ಲ : ವಕೀಲರ ವಾದ

ಹೊಸದಿಲ್ಲಿ: ಬಹುಕೋಟಿ ವಂಚನೆ ಹಗರಣದ ಆರೋಪಿ ಮೆಹುಲ್ ಚೋಕ್ಸಿಯನ್ನು ಭಾರತಕ್ಕೆ ನೇರವಾಗಿ ಗಡೀಪಾರು ಮಾಡಿಸಿಕೊಳ್ಳುವ ಪ್ರಯತ್ನವಾಗಿ ಸಂಬಂಧಿಸಿದ ಎಲ್ಲ ದಾಖಲೆಗಳು ಮತ್ತು ವಿಶೇಷ ವಿಮಾನವನ್ನು ಭಾರತ ಸರ್ಕಾರ ಡೊಮಿನಿಕಾ ದೇಶಕ್ಕೆ ಕಳುಹಿಸಿರುವ ನಡುವೆಯೇ, ಚೋಕ್ಸಿ ಭಾರತೀಯ ಪ್ರಜೆಯೇ ಅಲ್ಲ; ಆದ್ದರಿಂದ ಅವರನ್ನು ಭಾರತಕ್ಕೆ ಗಡೀಪಾರು ಮಾಡಲಾಗದು ಎಂಬ ವಾದವನ್ನು ಚೋಕ್ಸಿ ಪರ ವಕೀಲರು ಮುಂದಿಟ್ಟಿದ್ದಾರೆ.
ವಿಮಾನ ಈಗಾಗಲೇ ಡೊಮಿನಿಕಾದ ಡಗ್ನಾಸ್- ಚಾರ್ಲ್ಸ್ ವಿಮಾನ ನಿಲ್ದಾಣವನ್ನು ತಲುಪಿದ್ದರೂ, ಭಾರತಕ್ಕೆ ನಿಜವಾಗಿ ಇರುವ ಸವಾಲು, ಆರೋಪಿಯನ್ನು ಮತ್ತೆ ಆಂಟಿಗುವಾ ಮತ್ತು ಬಾರ್ಬಡಾಗೆ ಮರಳಿಸುವುದನ್ನು ತಡೆಯುವುದು. ಈ ವಜ್ರ ವ್ಯಾಪಾರಿಯ ಪೌರತ್ವ ರದ್ದುಪಡಿಸಲು ಸರ್ಕಾರ ಪ್ರಯತ್ನ ಆರಂಭಿಸಿದ್ದರೂ, ಚೋಕ್ಸಿ ಕಾನೂನಾತ್ಮಕ ಹಾಗೂ ಸಂವಿಧಾನಿಕ ಹಕ್ಕುಗಳನ್ನು ಹೊಂದಿದ್ದಾರೆ ಎಂದು ಅಲ್ಲಿನ ಪ್ರಧಾನಿ ಗ್ಯಾಸ್ಟನ್ ಬ್ರೌನ್ ಹೇಳಿದ್ದಾರೆ.
ಆದರೆ ಭಾರತೀಯ ಅಧಿಕಾರಿಗಳು ಚೋಕ್ಸಿಯನ್ನು ಆಂಟಿಗುವಾಗೆ ಗಡೀಪಾರು ಮಾಡಿಸುವ ಬದಲು ಡೊಮಿನಿಕಾದಿಂದ ನೇರವಾಗಿ ಪಡೆಯಬೇಕಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಚೋಕ್ಸಿಯನ್ನು ಅಪಹರಿಸಿ ಡೊಮಿನಿಕಾಗೆ ಕರೆದೊಯ್ಯಲಾಗಿದೆ ಎಂಬ ವರದಿಗಳನ್ನು ಅವರು ನಿರಾಕರಿಸಿದ್ದಾರೆ.
ಡೊಮಿನಿಕಾ ಅಧಿಕಾರಿಗಳು ಆರೋಪಿಯ ಗಡೀಪಾರಿಗೆ ಸಹಕರಿಸುತ್ತಿದ್ದರೂ, ನ್ಯಾಯಾಲಯಗಳ ತೀರ್ಪಿನ ಮೇಲೆ ಗಡೀಪಾರು ಭವಿಷ್ಯ ನಿರ್ಧಾರವಾಗಲಿದೆ. ಉಭಯ ದೇಶಗಳಲ್ಲಿ ಚೋಕ್ಸಿ ದುಬಾರಿ ವಕೀಲರ ನೆರವಿನೊಂದಿಗೆ ತಮ್ಮ ವಾದ ಮಂಡಿಸಿದ್ದಾರೆ. ಇದಕ್ಕೆ ಆಂಟಿಗುವಾ ಮತ್ತು ಬಾರ್ಬಡಾ ವಿರೋಧ ಪಕ್ಷಗಳ ಸಹಕಾರವೂ ಇದೆ ಎನ್ನಲಾಗಿದೆ.
ಚೋಕ್ಸಿ ಆಂಟಿಗುವಾ ಪೌರತ್ವ ಪಡೆದ ತಕ್ಷಣವೇ ಅವರ ಭಾರತೀಯ ಪೌರತ್ವ ರದ್ದಾಗಿದೆ. ಆದ್ದರಿಂದ ಅವರನ್ನು ಭಾರತಕ್ಕೆ ಗಡೀಪಾರು ಮಾಡುವಂತಿಲ್ಲ ಎಂಬ ವಾದವನ್ನು ಚೋಕ್ಸಿ ಪರ ವಕೀಲರು ಮುಂದಿಟ್ಟಿದ್ದಾರೆ. ಬುಧವಾರ ಡೊಮಿನಿಕಾ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ಮುಂದುವರಿಯಲಿದೆ.