ಜಿಲ್ಲಾಧಿಕಾರಿ ರೋಹಿಣಿ ವಿರುದ್ಧ ರಾಜ್ಯಪಾಲರು, ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಲಾಗುವುದು: ಶಾಸಕ ಸಾ.ರಾ.ಮಹೇಶ್
''ಜಿಲ್ಲಾ ಉಸ್ತುವಾರಿ ಸಚಿವರು, ಮುಖ್ಯ ಕಾರ್ಯದರ್ಶಿ ಮತ್ತು ಮುಖ್ಯಮಂತ್ರಿಗೆ ಜಿಲ್ಲಾಧಿಕಾರಿ ವಂಚಿಸಿದ್ದಾರೆ''

ಮೈಸೂರು: ಜಿಲ್ಲೆಯಲ್ಲಿ ಕೋವಿಡ್ ನಿಂದ ಹೆಚ್ವು ಸಾವು ಸಂಭವಿಸಿದ್ದರು ಸರ್ಕಾರಕ್ಕೆ ಕಡಿಮೆ ಸಂಖ್ಯೆಯ ಸುಳ್ಳು ಲೆಕ್ಕವನ್ನು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ನೀಡಿದ್ದಾರೆ ಎಂದು ಆರೋಪಿಸಿ ದಾಖಲೆ ಬಿಡುಗಡೆ ಮಾಡಿದ ಶಾಸಕ ಸಾ.ರಾ.ಮಹೇಶ್, ಈ ಸಂಬಂಧ ಜಿಲ್ಲಾಧಿಕಾರಿ ವಿರುದ್ಧ ರಾಜ್ಯಪಾಲರು, ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡುವುದಾಗಿ ತಿಳಿಸಿದ್ದಾರೆ.
ನಗರದ ಅವರ ಕಚೇರಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಮೇ ತಿಂಗಳ ಒಂದರಲ್ಲಿಯೇ ಮೈಸೂರು ನಗರದ ಮುಕ್ತಿಧಾಮಗಳಲ್ಲಿ ನೋಂದಣಿಯಾಗಿರುವ ಪ್ರಕಾರ 969 ಸಾವುಗಳ ಸಂಭವಿಸಿವೆ. ಆದರೆ ಜಿಲ್ಲಾಡಳಿತ ನೀಡಿರುವ ಲೆಕ್ಕ ಮಾತ್ರ 238. ಒಟ್ಟಾರೆ ಜಿಲ್ಲೆಯಾದ್ಯಂತ ಸುಮಾರು 3 ಸಾವಿರಕ್ಕಿಂತಲೂ ಹೆಚ್ಚು ಸಾವುಗಳು ಸಂಭವಿಸಿದೆ. ಇಷ್ಟಿದ್ದರು ಯಾಕೆ ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ಸುಳ್ಳು ಲೆಕ್ಕನೀಡಿದ್ದಾರೆ ಎಂದು ಪ್ರಶ್ನಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರು, ಮುಖ್ಯ ಕಾರ್ಯದರ್ಶಿ ಮತ್ತು ಮುಖ್ಯಮಂತ್ರಿಗಳಿಗೆ ಜಿಲ್ಲಾಧಿಕಾರಿಗಳು ವಂಚಿಸಿದ್ದಾರೆ. ಜನರ ಸಾವಿನ ಜೊತೆ ಚೆಲ್ಲಾಟ ಆಡಿ ಮಾನವಹಕ್ಕು ಉಲ್ಲಂಘನೆ ಮಾಡಿದ್ದಾರೆ. ಇವರ ವಿರುದ್ಧ ಶೀಘ್ರದಲ್ಲೇ ರಾಜ್ಯಪಾಲರನ್ನು ಭೇಟಿ ಮಾಡಿ ದೂರು ಸಲ್ಲಿಸುತ್ತೇನೆ. ಜೊತೆಗೆ ಮಾನವಹಕ್ಕು ಆಯೋಗಕ್ಕೂ ದೂರು ನೀಡುವುದಾಗಿ ಶಾಸಕ ಸಾ.ರಾ.ಮಹೇಶ್ ತಿಳಿಸಿದರು.
ನನ್ನ ದೃಷ್ಟಿ ಕೊರೋನ ನಿಯಂತ್ರಣ ಮಾತ್ರ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೇಳಿದ್ದಾರೆ. ಹಾಗಿದ್ದ ಮೇಲೆ ಕೊರೋನ ಟೆಸ್ಟಿಂಗ್ ಅನ್ನು ಏಕೆ ಕಡಿಮೆ ಮಾಡಿದರು. ಜಿಲ್ಲೆಯಲ್ಲಿ ಹೆಚ್ಚು ಸಾವುಗಳಾಗಿದ್ದರು ಏಕೆ ಸರ್ಕಾರಕ್ಕೆ ಸುಳ್ಳು ಲೆಕ್ಕ ನೀಡಿದರು ಎಂದು ಪ್ರಶ್ನಿಸಿದರು.
ದೇಶದ ಇತಿಹಾಸದಲ್ಲಿ ಮೈಸೂರಿನಲ್ಲಿಯೇ ಅತೀ ಹೆಚ್ಚು ಕೊರೋನ ಸೋಂಕಿತರು ಹಾಗೂ ಸಾವುಗಳು ಸಂಭವಿಸಿರುವುದು. ಆದರೂ ಇವರು ಸರ್ಕಾರಕ್ಕೆ ಸುಳ್ಳುಗಳನ್ನೇ ಹೇಳುತ್ತಿದ್ದಾರೆ ಎಂದು ಆರೋಪಿಸಿದರು.
ಇದೇ ಸಾವುಗಳು ನಿಮ್ಮ ಕುಟುಂಬದಲ್ಲಿ ಆಗಿದ್ದರೆ ಅವುಗಳನ್ನು ಮುಚ್ಚಿಡುತ್ತಿದ್ದೀರಾ ? ನಿಮಗೆ ಮಾನವೀಯತೆ, ಮನಯಷ್ಯತ್ವ, ತಾಯಿ ಹೃದಯ ಎಂಬುದೇ ಇಲ್ಲವಾ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಿನ್ನೆ ಜಿಲ್ಲಾಡಳಿತ ನೀಡಿರುವ ವರದಿಯಲ್ಲಿ, ಕೆ.ಆರ್.ನಗರ ಮತ್ತು ಪಿರಿಯಾಪಟ್ಟಣಗಳಲ್ಲಿ ಒಂದು ಸಾವು ಸಂಭವಿಸಿಲ್ಲ ಎಂದು ದಾಖಲೆ ಬಿಡುಗಡೆ ಮಾಡಿದ್ದಾರೆ. ನಮ್ಮ ಕೆ.ಆರ್.ನಗರದ ಚಿಕ್ಕನಾಯಕನಹಳ್ಳಿಯ ಕೆಂಪರಾಜು ಬಿನ್ ಹನುಮಂತೇಗೌಡ (49) ಕೊರೋನ ದಿಂದ ಮೃತ ಪಟ್ಟಿದ್ದಾರೆ. ಯಾಕೆ ಸುಳ್ಳುಗಳನ್ನು ಹೇಳುತ್ತೀರಿ ಎಂದು ಶಾಸಕ ಸಾ.ರಾ.ಮಹೇಶ್ ಕಿಡಿಕಾರಿದರು.








