"ಶವಗಳನ್ನು ನದಿಗೆ ಎಸೆಯುತ್ತಿರುವ ವರದಿ ನೋಡಿದ್ದೆ, ಮಾಧ್ಯಮಗಳ ಮೇಲೆ ದೇಶದ್ರೋಹ ಪ್ರಕರಣ ದಾಖಲಾಗಿದೆಯೋ ತಿಳಿದಿಲ್ಲ"
ಕೇಂದ್ರದ ಕುರಿತು ವ್ಯಂಗ್ಯವಾಡಿದ ಸುಪ್ರೀಂಕೋರ್ಟ್

ಹೊಸದಿಲ್ಲಿ: ಸರಕಾರವು ಕೋವಿಡ್ ಸಾಂಕ್ರಾಮಿಕವನ್ನು ನಿಯಂತ್ರಿಸುವಲ್ಲಿ ವಿಫಲವಾದ ಕುರಿತು ಮಾಧ್ಯಮ ವರದಿಗಳ ವಿರುದ್ಧ ಸರಕಾರದ ಅಸಹನೆಯ ಬಗ್ಗೆ ಸುಪ್ರೀಂ ಕೋರ್ಟ್ ವ್ಯಂಗ್ಯವಾಡಿದೆ. ಉತ್ತರಪ್ರದೇಶದಲ್ಲಿ ಮೃತದೇಹಗಳನ್ನು ನದಿಗೆ ಎಸೆಯುತ್ತಿರುವ ವರದಿ ಪ್ರಕಟಿಸಿದ್ದಕ್ಕಾಗಿ ಮಾಧ್ಯಮಗಳ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸಲಾಗಿದೆಯೋ ತಿಳಿದಿಲ್ಲ ಎಂದು ಸುಪ್ರೀಂ ಕೋರ್ಟ್ ಕೇಂದ್ರಕ್ಕೆ ಚಾಟಿಯೇಟು ನೀಡಿದೆ.
ಕೋವಿಡ್ ನಿರ್ವಹಣೆಗೆ ಸಂಬಂಧಿಸಿದಂತೆ ಸ್ವಯಂಪ್ರೇರಿತ ಅರ್ಜಿಯೊಂದನ್ನು ವಿಚಾರಣೆ ನಡೆಸುತ್ತಿರುವ ಮೂವರು ನ್ಯಾಯಾಧೀಶರ ಪೀಠದ ಮುಖ್ಯಸ್ಥರಾಗಿರುವ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರು ಈ ಹೇಳಿಕೆ ನೀಡಿದ್ದಾರೆ.
"ನಿನ್ನೆ ಮಾಧ್ಯಮಗಳ ಸುದ್ದಿ ವರದಿ ಪ್ರಕಾರ ಮೃತದೇಹಗಳನ್ನು ನದಿಗೆ ಎಸೆಯುತ್ತಿರುವುದನ್ನು ನೋಡಿದ್ದೆ. ಇನ್ನು ನ್ಯೂಸ್ ಚಾನೆಲ್ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಲಾಗಿದೆಯೇ ಎಂದು ನನಗೆ ತಿಳಿದಿಲ್ಲ" ಎಂಬುವುದಾಗಿ ಚಂದ್ರಚೂಡ್ ಟೀಕಿಸಿದ್ದಾರೆ.
ಕೋವಿಡ್ ಸಂಬಂಧಿತ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮಗಳ ಮೂಲಕ ಸಹಾಯವನ್ನು ಬಯಸುವವರ ವಿರುದ್ಧ ಸರ್ಕಾರಗಳು ಪ್ರಕರಣ ದಾಖಲಿಸುತ್ತಿರುವುದನ್ನು ಸುಪ್ರೀಂ ಕೋರ್ಟ್ ಟೀಕಿಸುತ್ತಿರುವುದು ಇದೇ ಮೊದಲಲ್ಲ. ಏಪ್ರಿಲ್ 30 ರಂದು ಈ ಪ್ರಕರಣದ ವಿಚಾರಣೆ ನಡೆದಾಗ, ನಾಗರಿಕರು ತಮ್ಮ ಸಾಂಕ್ರಾಮಿಕ ಸಂಬಂಧಿತ ಕುಂದುಕೊರತೆಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಸಂವಹನ ಮಾಡುವ ಬಗ್ಗೆ ಯಾವುದೇ ನಿರ್ಬಂಧವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತ್ತು.
ಅಧಿಕಾರಿಗಳ ಇಂತಹ ಯಾವುದೇ ಕ್ರಮವನ್ನು ನ್ಯಾಯಾಂಗ ನಿಂದನೆ ಎಂದೇ ಪರಿಗಣಿಸಲಾಗುತ್ತದೆ ಎಂದು ನ್ಯಾಯಮೂರ್ತಿ ಚಂದ್ರಚೂಡ್ ನೇತೃತ್ವದ ನ್ಯಾಯಪೀಠ ಮತ್ತು ನ್ಯಾಯಮೂರ್ತಿಗಳಾದ ಎಲ್ ನಾಗೇಶ್ವರ ರಾವ್ ಮತ್ತು ರವೀಂದ್ರ ಭಟ್ ಅವರನ್ನೊಳಗೊಂಡ ನ್ಯಾಯಪೀಠ ಆ ದಿನ ಹೇಳಿಕೆ ನೀಡಿತ್ತು.







