ಚಿಕ್ಕಮಗಳೂರು: ವೈದ್ಯನ ಮೇಲೆ ದುಷ್ಕರ್ಮಿಗಳಿಂದ ಮಾರಕಾಸ್ತ್ರಗಳಿಂದ ಹಲ್ಲೆ; ಸ್ಥಿತಿ ಗಂಭೀರ

ಚಿಕ್ಕಮಗಳೂರು, ಮೇ 31: ವೈಯಕ್ತಿಕ ಧ್ವೇಷದ ಹಿನ್ನೆಲೆಯಲ್ಲಿ ಅಪರಿಚತ ದುಷ್ಕರ್ಮಿಗಳ ಗುಂಪೊಂದು ಮಕ್ಕಳ ಆಸ್ಪತ್ರೆಯ ವೈದ್ಯನ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆನ್ನಲಾದ ಘಟನೆ ಸೋಮವಾರ ಮಧ್ಯಾಹ್ನ ಜಿಲ್ಲೆಯ ತರೀಕೆರೆ ಪಟ್ಟಣದಲ್ಲಿ ವರದಿಯಾಗಿದೆ.
ತರೀಕೆರೆ ಪಟ್ಟಣದಲ್ಲಿರುವ ಬಸವೇಶ್ವರ ಮಕ್ಕಳ ಆಸ್ಪತ್ರೆಯ ಮಕ್ಕಳ ತಜ್ಞ ಡಾ.ದೀಪಕ್ ಎಂಬವರ ಮೇಲೆ ದುಷ್ಕರ್ಮಿಗಳ ಗುಂಪು ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದು, ಘಟನೆಯಲ್ಲಿ ವೈದ್ಯನಿಗೆ ಗಂಭೀರ ಗಾಯವಾಗಿದೆ. ತರೀಕೆರೆ ಪಟ್ಟಣದ ಸಾರ್ವಜನಿಕ ತಾಲೂಕು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆಯ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ವೈದ್ಯರನ್ನು ಶಿವಮೊಗ್ಗ ನಗರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಸೋಮವಾರ ಬಸವೇಶ್ವರ ಮಕ್ಕಳ ಆಸ್ಪತ್ರೆಗೆ ಆಗಮಿಸಿದ್ದ ವೈದ್ಯ ಡಾ.ದೀಪಕ್ ಮಧ್ಯಾಹ್ನ ಊಟಕ್ಕೆಂದು ತಮ್ಮ ಮನೆಗೆ ಸೈಕಲ್ ಮೂಲಕ ಹೊರಟಿದ್ದಾಗ ಅಪರಿಚಿತ ದುಷ್ಕರ್ಮಿಗಳ ಗುಂಪು ಏಕಾಏಕಿ ವೈದ್ಯ ದೀಪಕ್ ಮೇಲೆ ಮಾರಕಾಸ್ತ್ರಗಳಿಂದ ತಲೆಗೆ ಹಲ್ಲೆ ಮಾಡಿದ್ದಾರೆ. ಹಲ್ಲೆಯಿಂದಾಗಿ ವೈದ್ಯರಿಗೆ ಗಂಭೀರ ಗಾಯವಾಗಿದೆ. ಅದೇ ದಾರಿಯಲ್ಲಿ ಬಂದ ಸಾರ್ವಜನಿಕರು ವೈದ್ಯರನ್ನು ಪಟ್ಟಣದ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆ ಸಂಬಂಧ ತರೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರ ತನಿಖೆಯ ಬಳಿಕ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.







