ಎಂಆರ್‌ಪಿಎಲ್ ನಿಂದ ಉದ್ಯೋಗ ವಂಚನೆ ಆರೋಪ: ಜೂ.5ರಂದು ಮನೆ-ಮನೆಗಳಲ್ಲಿ ಪ್ರತಿಭಟನೆ
ಮಂಗಳೂರು, ಮೇ 31: ಎಂಆರ್‌ಪಿಎಲ್ ಕಂಪೆನಿಯು 233 ಹುದ್ದೆಗಳ ನೇಮಕಾತಿಯಲ್ಲಿ ಅವಿಭಜಿತ ದ.ಕ. ಜಿಲ್ಲೆಗಳ ಸಹಿತ ರಾಜ್ಯದ ಅರ್ಹ ಉದ್ಯೋಕಾಂಕ್ಷಿಗಳನ್ನು ಹೊರಗಿಟ್ಟು ಹೊರ ರಾಜ್ಯದವರಿಗೆ ಅವಕಾಶ ಮಾಡಿಕೊಟ್ಟಿರುವ ಕ್ರಮವನ್ನು ಖಂಡಿಸಿ ತುಳುನಾಡಿನ ಸಮಾನ ಮನಸ್ಕ ಸಂಘಟನೆಗಳ ಸಹಕಾರದಲ್ಲಿ ಜೂ.5ರಂದು ಮನೆ ಮನೆಗಳಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಜೂ.5ರಂದು ತುಳುನಾಡಿನ ಜನತೆ ವಿವಿಧ ಬೇಡಿಕೆಗಳ ಪೋಸ್ಟರ್‌ಗಳನ್ನು ಬರೆದು ತಮ್ಮ ಮನೆಗಳ ಮುಂದೆ ಏಕಾಂಗಿ/ಕುಟುಂಬ ಸಮೇತರಾಗಿ ಹಿಡಿದು ಪ್ರತಿಭಟನೆ ನಡೆಸಬೇಕು. ಪೋಸ್ಟರ್‌ಗಳಲ್ಲಿ ತುಳುನಾಡ ಅಭಿವೃದ್ದಿಡ್ ತುಳುವಪ್ಪೆಜೋಕುಲೆಗ್ ಮಲ್ಲ ಪಾಲ್, ಮಹಿಷಿ ವರದಿ ಶಿಫಾರಸುಗಳು ಕಾಯ್ದೆಯಾಗಲಿ, ನಮ್ಮ ಪಾಲು ನಮಗೆ ದೊರಕಲಿ, ಎಂಆರ್‌ಪಿಎಲ್ ನೇಮಕಾತಿ ರದ್ದಾಗಲಿ, ಸಂಸದರೆ, ಶಾಸಕರುಗಳೇ... ಎಂಆರ್‌ಪಿಎಲ್ ಉದ್ಯೋಗಗಳು ಸ್ಥಳೀಯರ ಹಕ್ಕು, ಭರವಸೆ ಸಾಕು, ಉದ್ಯೋಗ ಬೇಕು, ಹಲೋ ಸಂಸದ ನಳಿನ್ ಕುಮಾರ್.., ಎಂಆರ್‌ಪಿಎಲ್ ಉದ್ಯೋಗ ನೇಮಕಾತಿ ರದ್ದುಗೊಳಿಸಿ, ಆಗದಿದ್ದಲ್ಲಿ ರಾಜೀನಾಮೆ ಕೊಡಿ, ನೆಲ ನಮ್ಮದು, ಜಲ ನಮ್ಮದು, ಉದ್ಯೋಗವೂ ನಮ್ಮದೆ, ಎಂಆರ್‌ಪಿಎಲ್ ಉದ್ಯೋಗ ಭಿಕ್ಷೆಯಲ್ಲ, ನಮ್ಮ ಹಕ್ಕು, ನೆಲ ನಮ್ಮದು, ಜಲ ನಮ್ಮದು, ಉದ್ಯೋಗವೂ ನಮ್ಮದೇ..., ಸ್ಥಳೀಯರಿಗೆ ಉದ್ಯೋಗ ನಿರಾಕರಿಸುವ ಕಂಪೆನಿಗಳಿಗೆ ಬೀಗ ಜಡಿ ಯಿರಿ, ಮಣ್ಣಿನ ಮಕ್ಕಳಿಗೆ ಉದ್ಯೋಗ ಒದಗಿಸದ ಎಂಆರ್‌ಪಿಎಲ್ ವಿಸ್ತರಣೆಗೆ ಭೂ ಸ್ವಾಧೀನ ತಕ್ಷಣ ಸ್ಥಗಿತಗೊಳ್ಳಲಿ ಇತ್ಯಾದಿ ಬರೆಯಲು ಮನವಿ ಮಾಡಿದ್ದಾರೆ.





