ಕೊರೋನ ಸೋಂಕಿನಿಂದ ಚೇತರಿಸಿಕೊಂಡವರಲ್ಲಿ ಜೀವನ ಪರ್ಯಂತ ರೋಗ ನಿರೋಧಕ ಶಕ್ತಿ: ಅಧ್ಯಯನ ವರದಿ

ಹೊಸದಿಲ್ಲಿ, ಮೇ 31: ಕೊರೋನ ಸೋಂಕಿನ ವಿರುದ್ದ ಲಸಿಕೆ ಪಡೆದವರು ಅಥವಾ ಸಾರ್ಸ್ 2 ಸೋಂಕಿಗೆ ಒಳಗಾದವರಲ್ಲಿ ಈ ಸೋಂಕಿನ ವಿರುದ್ಧ ಜೀವನಪರ್ಯಂತ ರೋಗನಿರೋಧಕ ಶಕ್ತಿ ಉಂಟಾಗುತ್ತದೆ ಎಂದು 2 ಅಧ್ಯಯನ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಕೊರೋನ ಸೋಂಕಿಗೆ ಒಳಗಾದವರಲ್ಲಿ ಮತ್ತೆ ಸೋಂಕು ಮರುಕಳಿಸುವುದಿಲ್ಲ ಎಂದು ಖಾತರಿ ನೀಡದಿದ್ದರೂ, ಸೋಂಕಿನ ವಿರುದ್ಧದ ರೋಗನಿರೋಧಕ ಶಕ್ತಿ ದೇಹದಲ್ಲಿ ಹುಟ್ಟುತ್ತದೆ ಎಂಬುದು ಅಧ್ಯಯನದಿಂದ ಸ್ಪಷ್ಟವಾಗಿದೆ. ಕೋವಿಡ್-19 ಅಥವಾ ಸಾರ್ಸ್-2 ಸೋಂಕಿನ ವಿರುದ್ದದ ರೋಗನಿರೋಧಕ ಶಕ್ತಿ ಸ್ಥಿರವಾಗಿರಬೇಕಿದ್ದರೆ ಪ್ರತೀ ವರ್ಷಕ್ಕೊಮ್ಮೆ ಅಥವಾ 6 ತಿಂಗಳಿಗೊಮ್ಮೆ ಲಸಿಕೆ ಹಾಕಿಕೊಳ್ಳಬೇಕಾಗುತ್ತದೆ ಎಂದು ವಿಜ್ಞಾನಿಗಳು ಮತ್ತು ಜನರು ಆತಂಕಕ್ಕೆ ಒಳಗಾಗಿದ್ದರು. ಆದರೆ ಲಸಿಕೆಯಿಂದ ಉಂಟಾದ ರೋಗನಿರೋಧಕ ಶಕ್ತಿ ಕನಿಷ್ಟ ಒಂದು ವರ್ಷದವರೆಗೆ ಇರುತ್ತದೆ. ಕೆಲವರಲ್ಲಿ ದಶಕಗಳ ಕಾಲ ಇರಬಹುದು ಎಂದು ವಿಜ್ಞಾನಿಗಳು ಅಧ್ಯಯನದಿಂದ ಕಂಡುಕೊಂಡಿದ್ದಾರೆ.
ಮೂಳೆ ಮಜ್ಜೆಯಲ್ಲಿ ರೋಗನಿರೋಧಕ ಕೋಶಗಳು ಇರುವುದು ಸ್ಪಷ್ಟವಾಗಿದೆ. ಕೋವಿಡ್-19ರಿಂದ ಚೇತರಿಸಿಕೊಂಡ ಕೆಲ ಸಮಯದ ಬಳಿಕ ರಕ್ತದಲ್ಲಿರುವ ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತಾ ಹೋಗುತ್ತದೆ. ಆದರೆ ಮೂಳೆ ಮಜ್ಜೆಯಲ್ಲಿರುವ ರೋಗನಿರೋಧಕ ಕೋಶ ದೇಹಕ್ಕೆ ಅಗತ್ಯವಿರುವಾಗ ರೋಗನಿರೋಧಕ ಶಕ್ತಿ ಬೆಳೆಸುವುದು ಅಧ್ಯಯನದಿಂದ ತಿಳಿದುಬಂದಿದೆ.
ಮೂಳೆ ಮಜ್ಜೆಯ ಸಂಪರ್ಕ ಮತ್ತು ಟಿ-ಕೋಶಗಳನ್ನು ಉತ್ಪಾದಿಸುವ ನಿರೋಧಕ ವ್ಯವಸ್ಥೆಯ ಸಾಮರ್ಥ್ಯ(ಟಿ-ಕೋಶಗಳು ಮೂಲ ರೋಗವನ್ನು ನೆನಪಿನಲ್ಲಿಟ್ಟುಕೊಳ್ಳುತ್ತವೆ)ವು ಹೊಸ ಆಶಾವಾದಕ್ಕೆ ಕಾರಣವಾಗಿದೆ. ಮೂಲಸೋಂಕು ಮತ್ತೆ ಮರುಕಳಿಸಿದರೆ ತಕ್ಷಣ ಪ್ರತಿರೋಧಕ ಶಕ್ತಿ ಬೆಳೆಸಲು ಇದು ನೆರವಾಗುತ್ತದೆ. ಲಸಿಕೆ ಪಡೆದು ರೋಗ ನಿರೋಧಕ ಶಕ್ತಿ ವೃದ್ಧಿಸಿಕೊಂಡವರಿಗಿಂತಲೂ, ಕೊರೋನ ಸೋಂಕಿನಿಂದ ಚೇರಿಸಿಕೊಂಡವರು ಮುಂದಿನ ದಿನದಲ್ಲಿ ಸಾರ್ಸ್-2 ಸೋಂಕನ್ನು ಎದುರಿಸಲು ಹೆಚ್ಚು ಸಾಮರ್ಥ್ಯ ಬೆಳೆಸಿಕೊಂಡಿರುತ್ತಾರೆ ಎಂದು ಅಧ್ಯಯನದ ವರದಿ ಹೇಳಿದೆ.