ಪಂಜಾಬ್ ಕಾಂಗ್ರೆಸ್ ನಲ್ಲಿ ಬಿಕ್ಕಟ್ಟು ಉಲ್ಬಣ: ರಾಜ್ಯಕ್ಕೆ ಕೇಂದ್ರಿಯ ತಂಡದ ಭೇಟಿ

ಅಮೃತಸರ,ಮೇ 31: ರಾಜ್ಯಗಳಲ್ಲಿ ತನ್ನ ನೆಲೆಯನ್ನು ಕಳೆದುಕೊಳ್ಳುತ್ತಿರುವ ಕಾಂಗ್ರೆಸ್ ಯಾವುದೇ ಮಿತ್ರಪಕ್ಷದ ನೆರವಿಲ್ಲದೆ ತಾನು ಅಧಿಕಾರದಲ್ಲಿರುವ ಕೆಲವೇ ರಾಜ್ಯಗಳಲ್ಲಿ ಒಂದಾಗಿರುವ ಪಂಜಾಬ್ ನಲ್ಲಿ ಭಾರೀ ಭಿನ್ನಾಭಿಪ್ರಾಯಗಳ ಸುಳಿಗೆ ಸಿಲುಕಿದೆ. 2017ರಲ್ಲಿ ಅಕಾಲಿದಳ-ಬಿಜೆಪಿ ಮೈತ್ರಿಕೂಟದ 10 ವರ್ಷಗಳ ಆಡಳಿತವನ್ನು ಅಂತ್ಯಗೊಳಿಸಿ ಕಾಂಗ್ರೆಸ್ ಗೆ ಜಯವನ್ನು ತಂದುಕೊಟ್ಟಿದ್ದ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರು ಭಿನ್ನಮತೀಯರ ಗುರಿಯಾಗಿದ್ದಾರೆ. ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯನ್ನು ಸಿಂಗ್ ನಾಯಕತ್ವದಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂದು ಭಿನ್ನಮತೀಯರು ವಾದಿಸುತ್ತಿದ್ದಾರೆ.
ಬಿಕ್ಕಟ್ಟನ್ನು ಶಮನಿಸುವ ಪ್ರಯತ್ನವಾಗಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರು ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ಮೂವರು ಸದಸ್ಯರ ಸಮಿತಿಯನ್ನು ರಚಿಸಿದ್ದು, ರಾಜ್ಯದ ಎಲ್ಲ ನಾಯಕರನ್ನು ವೈಯಕ್ತಿಕವಾಗಿ ಭೇಟಿಯಾಗುವಂತೆ ಸೂಚಿಸಿದ್ದಾರೆ. ಸಮಿತಿಯು ಸೋಮವಾರ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಸುನಿಲ ಜಾಖಡ್ ಸೇರಿದಂತೆ 25 ರಾಜ್ಯ ನಾಯಕರನ್ನು ಭೇಟಿಯಾಗಿ ಚರ್ಚಿಸಿದೆ.
ಸಿಂಗ್ ವಿರುದ್ಧ ಹಲವಾರು ದೂರುಗಳಿದ್ದು, ವಿಶೇಷವಾಗಿ ಸಚಿವರೋರ್ವರ ವಿರುದ್ಧದ ಮೀ ಟೂ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಂಗ್ ಕಿರುಕುಳ ನೀಡುತ್ತಿದ್ದಾರೆ ಎಂದೂ ಕೆಲವು ನಾಯಕರು ಆರೋಪಿಸಿದ್ದಾರೆ. ಆದರೆ ಗುರು ಗ್ರಂಥಸಾಹಿಬ್ ಅನ್ನು ವಿರೂಪಗೊಳಿಸಿದ್ದ ದುಷ್ಕರ್ಮಿಗಳನ್ನು ಬಂಧಿಸುವಲ್ಲಿ ಮತ್ತು 2015ರಲ್ಲಿ ಶಾಂತಿಯುತ ಪ್ರತಿಭಟನೆ ಸಂದರ್ಭ ಪೊಲೀಸ್ ಗೋಲಿಬಾರಿನ ತಪ್ಪಿತಸ್ಥರ ವಿರುದ್ಧ ಕ್ರಮವನ್ನು ಜರುಗಿಸುವಲ್ಲಿ ಸರಕಾರದ ವೈಫಲ್ಯ ಮುಖ್ಯ ವಿಷಯಗಳಾಗಿವೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಪಕ್ಷದೊಳಗೆ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಅವರೊಂದಿಗೆ ಸಿಂಗ್ ಬದ್ಧವೈರತ್ವ ಹೊಂದಿದ್ದು, 2017ರಲ್ಲಿ ಪಕ್ಷವು ಜಯ ಸಾಧಿಸಿದಾಗಿನಿಂದ ಇದು ಮುಂದುವರಿದುಕೊಂಡು ಬಂದಿದೆ. ಆಗ ಸಿಂಗ್ ಅವರ ಆಕ್ಷೇಪದಿಂದಾಗಿ ಸಿಧು ಉಪಮುಖ್ಯಮಂತ್ರಿಯಾಗಲು ಸಾಧ್ಯವಾಗಿರಲಿಲ್ಲ.
ಸಿಧು ಅಶಿಸ್ತನ್ನು ಪ್ರದರ್ಶಿಸುತ್ತಿದ್ದಾರೆ,ಅವರು ಆಪ್ ಗೆ ಸೇರಬಹುದು ಎಂದು ಸಿಂಗ್ ಇತ್ತೀಚಿಗೆ ಹೇಳಿದ್ದರು. ಇದರಿಂದ ಆಕ್ರೋಶಿತ ಸಿಧು ತನ್ನ ಆರೋಪವನ್ನು ಸಾಬೀತುಗೊಳಿಸುವಂತೆ ಮುಖ್ಯಮಂತ್ರಿಗಳಿಗೆ ಆಗ್ರಹಿಸಿ ಟ್ವೀಟಿಸಿದ್ದಾರೆ.