ಗ್ರಾಹಕನ ಖಾತೆಯಿಂದ ಹಣ ವಂಚನೆ : ದೂರು
ಮಂಗಳೂರು, ಮೇ 31: ಬ್ಯಾಂಕ್‌ನ ಗ್ರಾಹಕರೊಬ್ಬರಿಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿಯೊಬ್ಬ ‘ನಿಮ್ಮ ಏರ್‌ಟೆಲ್ ಸಿಮ್ ವೆರಿಫಿಕೇಷನ್‌ಗೆ ದಾಖಲಾತಿ ಕೊಡಿ ಎಂದು ಹೇಳಿ ಹಂತ ಹಂತವಾಗಿ 74,989 ರೂ. ವಂಚಿಸಿರುವ ಬಗ್ಗೆ ನಗರ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೇ 28ರಂದು ಅಪರಿಚಿತ ವ್ಯಕ್ತಿಯೊಬ್ಬ ಗ್ರಾಹಕರೊಬ್ಬರಿಗೆ ಕರೆ ಮಾಡಿ ನಿಮ್ಮ ಏರ್‌ಟೆಲ್ ಸಿಮ್ ವೆರಿಫಿಕೇಷನ್ ಬಗ್ಗೆ ದಾಖಲಾತಿ ಪರಿಶೀಲನೆ ಬಾಕಿಯಿದೆ. ದಾಖಲಾತಿ ಸಲ್ಲಿಸದಿದ್ದಲ್ಲಿ ಸೇವೆ ಸ್ಥಗಿತಗೊಳ್ಳುವುದಾಗಿ ತಿಳಿಸಿದ್ದಾನೆ. ಇದರಿಂದ ಆತಂಕಿತರಾದ ಗ್ರಾಹಕರು ಅಪರಿಚಿತ ಕೇಳಿದ ಮಾಹಿತಿ ನೀಡಿದ್ದಲ್ಲದೆ ಅಪರಿಚಿತ ಹೇಳಿದಂತೆ ತನ್ನ ಮೊಬೈಲ್‌ನಲ್ಲೇ ಲಿಂಕ್ ಒಂದನ್ನು ತೆರೆದು ಆ್ಯಪ್‌ವೊಂದನ್ನು ಡೌನ್ ಲೋಡ್ ಮಾಡಿ ರಿಚಾರ್ಜ್ ಮಾಡಿದ್ದಾರೆ. ಆ ಬಳಿಕ ಅಪರಿಚಿತ ವ್ಯಕ್ತಿಯು ಆ್ಯಪ್ ಮುಖಾಂತರ ದಾಖಲಿಸಿದ ಮಾಹಿತಿಗಳನ್ನು ಸಂಗ್ರಹಿಸಿ ಹಂತಹಂತವಾಗಿ 74,989 ರೂ. ಗಳನ್ನು ಬೇರೆ ಖಾತೆಗಳಿಗೆ ಅನಧಿಕೃತವಾಗಿ ವರ್ಗಾಯಿಸಿ ಮೋಸ ಮಾಡಿದ್ದಾನೆ.
ಈ ಬಗ್ಗೆ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.





