ಸೆಂಟ್ರಲ್ ವಿಸ್ತ ಯೋಜನೆಯ ಬಗ್ಗೆ ಸುಳ್ಳು ಮಾಹಿತಿ ಪ್ರಸಾರ ಮಾಡಲಾಗುತ್ತಿದೆ: ಕೇಂದ್ರ

ಹೊಸದಿಲ್ಲಿ, ಮೇ 31: ಸೆಂಟ್ರಲ್ ವಿಸ್ತ ಯೋಜನೆಯ ಬಗ್ಗೆ ಸುಳ್ಳು ಮಾಹಿತಿ ಪ್ರಸಾರ ಮಾಡಲಾಗುತ್ತಿದೆ. ಹೊಸ ಸಂಸತ್ ಭವನ ಪ್ರತಿಷ್ಠೆಯ ವಿಷಯವಲ್ಲ, ಅಗತ್ಯದ ಯೋಜನೆಯಾಗಿದೆ. ಈ ಯೋಜನೆಯ ಕಾಮಗಾರಿ ವೇಳೆ ಯಾವುದೇ ಪಾರಂಪರಿಕ ಕಟ್ಟಡಗಳನ್ನು ಸ್ಪರ್ಷಿಸುವುದಿಲ್ಲ ಎಂದು ಕೇಂದ್ರ ಸಚಿವ ಹರ್ದೀಪ್ ಪುರಿ ಸೋಮವಾರ ಹೇಳಿದ್ದಾರೆ.
ಪ್ರಧಾನಿಯವರ ನಿವಾಸದ ಕುರಿತು ಯಾವುದೇ ವಿನ್ಯಾಸವನ್ನು ಅಂತಿಮಗೊಳಿಸಿಲ್ಲ. ಸಂಸತ್ಭವನ ಕಟ್ಟಡ ಮತ್ತು ಸೆಂಟ್ರಲ್ ವಿಸ್ತದ ವ್ಯಾಪ್ತಿಯನ್ನು ಅಗಲಗೊಳಿಸುವ ಕಾಮಗಾರಿ ಮಾತ್ರ ಜಾರಿಯಲ್ಲಿದೆ. ಸೆಂಟ್ರಲ್ ವಿಸ್ತ ಮತ್ತು ಸೆಂಟ್ರಲ್ ವಿಸ್ತ ಅವೆನ್ಯೂ ವಿಭಿನ್ನ ವಿಷಯಗಳು. ಆದರೆ ಇವನ್ನು ಮುಕ್ತವಾಗಿ ಅದಲು ಬದಲು ಮಾಡಿಕೊಳ್ಳಲಾಗಿದೆ.
ಹೊಸ ಸಂಸತ್ ಭವನ ನಿರ್ಮಾಣ ನಿರ್ಧಾರವನ್ನು 2012ರಲ್ಲಿ ಕಾಂಗ್ರೆಸ್ ಸರಕಾರದ ಸಂದರ್ಭದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಸಂಸತ್ ಭವನ ನಿರ್ಮಾಣ ಯೋಜನೆ 862 ಕೋಟಿ ರೂ. ವೆಚ್ಚದ್ದು ಮತ್ತು ಸೆಂಟ್ರಲ್ ವಿಸ್ತ ಅವೆನ್ಯೂ ಯೋಜನೆ 477 ಕೋಟಿ ರೂ.ಯದ್ದು. ಈಗ ನಡೆಯುತ್ತಿರುವ ಕಾಮಗಾರಿಯ ಒಟ್ಟು ವೆಚ್ಚ 1,300 ಕೋಟಿ ರೂ. ದೇಶದ 75ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭವಾದ 2022ರೊಳಗೆ ಹೊಸ ಸಂಸತ್ ಭವನ ನಿರ್ಮಾಣ ಯೋಜನೆ ಪೂರ್ಣಗೊಳಿಸುವ ಉದ್ದೇಶವಿದೆ. ಈಗಿನ ಸಂಸತ್ ಭವನ ಭೂಕಂಪ ವಲಯದಲ್ಲಿರುವುದರಿಂದ ಹೊಸ ಯೋಜನೆ ಅತ್ಯಗತ್ಯದ ಯೋಜನೆಯಾಗಿದೆ ವಿನಃ ಪ್ರತಿಷ್ಟೆಗಾಗಿ ಕೈಗೆತ್ತಿಕೊಂಡಿಲ್ಲ ಎಂದು ಪುರಿ ಹೇಳಿದರು.
ಬೃಹತ್ ಮೊತ್ತದ ಈ ಯೋಜನೆ ಬಗ್ಗೆ ವ್ಯಾಪಕ ಟೀಕೆ ಎದುರಾಗಿದೆ. ಕೊರೋನ ಸಾಂಕ್ರಾಮಿಕದ ಸಂದರ್ಭದಲ್ಲಿ ಈ ಯೋಜನೆ ಮುಂದುವರಿಸುವ ಅಗತ್ಯವಿತ್ತೇ ಎಂದು ವಿಪಕ್ಷಗಳು ಪ್ರಶ್ನಿಸಿವೆ. ಈ ಮಧ್ಯೆ, ಪ್ರಧಾನಿಯವರ ನೂತನ ನಿವಾಸ ನಿರ್ಮಾಣ ಕಾಮಗಾರಿ ಆಗಸ್ಟ್ ನಲ್ಲಿ ಆರಂಭವಾಗಲಿದೆ ಎಂಬ ಮಾಧ್ಯಮದ ವರದಿಯನ್ನು ‘ಮನೋರಂಜಕ’ ಎಂದು ಬಣ್ಣಿಸಿರುವ ಪುರಿ, ನೂತನ ನಿವಾಸದ ಕಾಮಗಾರಿ ಆರಂಭಕ್ಕೂ ಮುನ್ನ ವಿನ್ಯಾಸವನ್ನು ಅಂತಿಮಗೊಳಿಸಬೇಕಿದೆ ಎಂದು ಟ್ವೀಟ್ ಮಾಡಿದ್ದಾರೆ.