ಅಹ್ಮದ್ ನಗರದಲ್ಲೇ 8000 ಮಕ್ಕಳಿಗೆ ಕೋವಿಡ್ ಸೋಂಕು ದೃಢ: 3ನೇ ಅಲೆ ಎದುರಿಸಲು ಮಹಾರಾಷ್ಟ್ರದಲ್ಲಿ ಸಿದ್ಧತೆ

ಮುಂಬೈ, ಮೇ 31: ಮೇ ತಿಂಗಳಲ್ಲಿ ಮಹಾರಾಷ್ಟ್ರದ ಅಹ್ಮದ್ ನಗರ ಜಿಲ್ಲೆಯೊಂದರಲ್ಲೇ 8000ಕ್ಕೂ ಅಧಿಕ ಮಕ್ಕಳಿಗೆ ಕೊರೋನ ಸೋಂಕು ದೃಢಪಟ್ಟಿದ್ದು, ಕೊರೋನ ಸೋಂಕಿನ ಸಂಭಾವ್ಯ 3ನೇ ಅಲೆಯನ್ನು ಎದುರಿಸಲು ರಾಜ್ಯದಲ್ಲಿ ಹೆಚ್ಚುವರಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಸಾಂಗ್ಲಿಯಲ್ಲಿ ಮಕ್ಕಳಿಗೆಂದೇ ವಿಶೇಷ ಕೋವಿಡ್ ವಾರ್ಡ್ ಸಿದ್ಧಗೊಳಿಸಲಾಗಿದೆ. ಇಲ್ಲಿ ಈಗ 5 ಮಕ್ಕಳು ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಲ್ಲಿ ದಾಖಲಾಗುವ ಮಕ್ಕಳು ತಾವು ಆಸ್ಪತ್ರೆಯಲ್ಲಿಲ್ಲ, ಶಾಲೆಯಲ್ಲಿದ್ದೇವೆ ಎಂದು ಭಾವಿಸುವ ರೀತಿಯ ವ್ಯವಸ್ಥೆ ಮಾಡಲಾಗಿದೆ ಎಂದು ಸಾಂಗ್ಲಿಯ ಕಾರ್ಪೊರೇಟರ್ ಅಭಿಜಿತ್ ಭೋಸಲೆ ಹೇಳಿದ್ದಾರೆ. ಅಹ್ಮದಾಬಾದ್ ಜಿಲ್ಲೆಯಲ್ಲಿ ಮೇ ತಿಂಗಳೊಂದರಲ್ಲೇ 8000ಕ್ಕೂ ಅಧಿಕ ಮಕ್ಕಳಲ್ಲಿ ಸೋಂಕು ದೃಢಪಟ್ಟಿರುವುದು ಆತಂಕದ ವಿಷಯವಾಗಿದೆ.
ಸೋಂಕಿನ 2ನೇ ಅಲೆಯಲ್ಲಿ ಹಾಸಿಗೆ, ಆಮ್ಲಜನಕ, ಔಷಧದ ಕೊರತೆ ಎದುರಾಗಿತ್ತು. ಆದರೆ ಈ ಬಾರಿ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿ ಸಿದ್ಧತೆ ನಡೆಸಲಾಗಿದೆ ಎಂದು ಜಿಲ್ಲಾ ಮುಖ್ಯ ವೈದ್ಯಾಧಿಕಾರಿ ಹೇಳಿದ್ದಾರೆ. ಜುಲೈ ಅಂತ್ಯದ ವೇಳೆ ಅಥವಾ ಆಗಸ್ಟ್ ಆರಂಭದಲ್ಲಿ ಸೋಂಕಿನ 3ನೇ ಅಲೆಯನ್ನು ನಿರೀಕ್ಷಿಸಲಾಗಿದ್ದು ಈ ಬಾರಿ ಸೂಕ್ತ ಮುನ್ನೆಚ್ಚರಿಕೆ ವಹಿಸಲಾಗಿದೆ . ಸಿದ್ಧರಾಗಲು ನಮಗೆ 2 ತಿಂಗಳ ಅವಕಾಶವಿದೆ ಎಂದು ಸರಕಾರದ ಮೂಲಗಳು ಹೇಳಿವೆ.