ಮುಂದೆ ಕೋವಿಡ್-26, ಕೋವಿಡ್-32 ಸಾಂಕ್ರಾಮಿಕಗಳೂ ಬರಬಹುದು: ಅಮೆರಿಕ ವಿಜ್ಞಾನಿಗಳ ಎಚ್ಚರಿಕೆ

ವಾಶಿಂಗ್ಟನ್, ಮೇ 31: ಭವಿಷ್ಯದಲ್ಲಿ ಕೊರೋನ ವೈರಸ್ ಸಾಂಕ್ರಾಮಿಕದ ಬೆದರಿಕೆಯಿಂದ ತಪ್ಪಿಸಿಕೊಳ್ಳಬೇಕಾದರೆ ಕೋವಿಡ್-19ರ ಮೂಲವನ್ನು ಪತ್ತೆಹಚ್ಚುವಲ್ಲಿ ಚೀನಾ ಸರಕಾರವು ಜಗತ್ತಿಗೆ ಸಹಕಾರ ನೀಡಬೇಕು ಎಂದು ಅಮೆರಿಕದ ಇಬ್ಬರು ಪ್ರಮುಖ ಕಾಯಿಲೆ ತಜ್ಞರು ರವಿವಾರ ಹೇಳಿದ್ದಾರೆ.
ಚೀನಾದ ವುಹಾನ್ ನಗರದಲ್ಲಿರುವ ಪ್ರಯೋಗಾಲಯವೊಂದರಿಂದ ತಪ್ಪಿಸಿಕೊಂಡು ಹೊರಬಂದಿರಬಹುದಾದ ವೈರಸ್ ಕೋವಿಡ್-19ಕ್ಕೆ ಕಾರಣವಾಗಿರಬಹುದು ಎನ್ನುವ ಸಿದ್ಧಾಂತ ಬಲಗೊಳ್ಳುತ್ತಿದೆ ಎಂದು ಅಮೆರಿಕದ ಆಹಾರ ಮತ್ತು ಔಷಧ ಇಲಾಖೆಯ ಮಾಜಿ ಕಮಿಶನರ್ ಸ್ಕಾಟ್ ಗೋಟ್ಲೀಬ್ ಹೇಳಿದ್ದಾರೆ.
‘‘ಸಾಂಕ್ರಾಮಿಕ ಹೇಗೆ ಆರಂಭವಾಯಿತು ಎನ್ನುವುದು ತಿಳಿಯದಿದ್ದರೆ ಜಗತ್ತಿನಲ್ಲಿ ಮುಂದೆಯೂ ಇಂಥ ಸಾಂಕ್ರಾಮಿಕಗಳು ಸ್ಫೋಟಗೊಳ್ಳುವ ಅಪಾಯಗಳು ಇರುತ್ತವೆ. ಮುಂದೆ ಕೋವಿಡ್-26, ಕೋವಿಡ್-32 ಮುಂತಾದ ರೋಗಗಳೂ ಬರಬಹುದು’’ ಎಂದು ಟೆಕ್ಸಾಸ್ ಮಕ್ಕಳ ಆಸ್ಪತ್ರೆಯ ಲಸಿಕೆ ಅಭಿವೃದ್ಧಿ ಕೇಂದ್ರದ ಸಹನಿರ್ದೇಶಕ ಪೀಟರ್ ಹೊಟೇಝ್ ಟಿವಿ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.
Next Story





