ಸಚಿವ ಪ್ರಭು ಚವ್ಹಾಣ್ ವಿತರಿಸುತ್ತಿರುವ ಆಹಾರ ತಿನ್ನಲಿಕ್ಕೆ ಬಾರದಂತಿದೆ: ಅಲೆಮಾರಿ ಜನಾಂಗದ ಮಹಿಳೆಯರ ಆರೋಪ

ಬೀದರ್, ಮೇ 31: ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ಅವರು ವಿತರಿಸುತ್ತಿರುವ ಆಹಾರ ಕಳಪೆ ಗುಣಮಟ್ಟದಿಂದ ಕೂಡಿದೆ ಎಂಬ ಆರೋಪ ಕೇಳಿ ಬಂದಿದ್ದು, ಈ ಬಗ್ಗೆ ಬೀದರ್ ಜಿಲ್ಲೆಯ ಔರಾದ್ ಪಟ್ಟಣದ ಅಲೆಮಾರಿ ಜನಾಂಗದ ಮಹಿಳೆಯರು ಆರೋಪಿಸಿದ್ದಾರೆ.
ಔರಾದ ಪಟ್ಟಣದ ಹೊರವಲಯದಲ್ಲಿರುವ ಅಲೆಮಾರಿ ಜನಾಂಗದವರು ವಾಸಿಸುವ ಗುಡಿಸಲುಗಳಿಗೆ ಕೆಲವು ಸಂಘಟನೆಯ ಪದಾಧಿಕಾರಿಗಳು ಹೋಗಿ ತಮ್ಮ ವತಿಯಿಂದ ಉಚಿತವಾಗಿ ಆಹಾರಗಳನ್ನು ಹಂಚುವ ಸಂದರ್ಭದಲ್ಲಿ ಅಲೆಮಾರಿ ಜನಾಂಗದ ಮಹಿಳೆಯರು, ನಿಮ್ಮ ಆಹಾರ ಚೆನ್ನಾಗಿದೆ, ಪ್ರಭು ಚವ್ಹಾಣ ಅವರು ಹಂಚುತ್ತಿರುವ ಆಹಾರವನ್ನು ಮಕ್ಕಳು ಮುಟ್ಟುತ್ತಿಲ್ಲ, ನಾವು ಸಹ ತಿನ್ನುತ್ತಿಲ್ಲ. ಅದು ತಿನ್ನುವುದಕ್ಕೆ ಬಾರದಂತಿದೆ ಎಂದಿದ್ದಾರೆ.
ಅದು ದಪ್ಪ ಅಕ್ಕಿಯಿಂದ ಕೂಡಿರುವುದು ಅಲ್ಲದೆ ಉಪ್ಪು, ಖಾರ ಹೆಚ್ಚಾಗಿರುವುದರಿಂದ ಮತ್ತು ರುಚಿಕರವಾಗಿ ಇಲ್ಲ. ಹೀಗಾಗಿ, ಮಕ್ಕಳು ಅದನ್ನು ತಿನ್ನುತ್ತಿಲ್ಲ. ಹೀಗಾಗಿ, ಅವರ ಆಹಾರ ಹಾಗೆಯೇ ಉಳಿದುಬಿಡುತ್ತದೆ. ಬೇಕಾದರೆ ನೀವು ಒಂದು ಸಲ ನೋಡಿ ಎಂದು ಅಲ್ಲಿದ್ದ ಮಕ್ಕಳಿಗೆ ಪ್ರಭು ಚವ್ಹಾಣ್ ಹಂಚಿದ ಆಹಾರವನ್ನು ಪ್ರದರ್ಶಿಸಿದರು.
ಅಲ್ಲದೆ, ಸಚಿವ ಪ್ರಭು ಚವ್ಹಾಣ್ ಅವರು ದಿನಂಪ್ರತಿ ಎರಡು ಹೊತ್ತು ಊಟ ಹಂಚುತ್ತಿದ್ದಾರೆ. ಕಳೆದ ಹದಿನೈದು ದಿನಗಳಿಂದ ಊಟದ ವಿತರಣೆ ಮಾಡುತ್ತಿದ್ದಾರೆ. ಬೆಳಗ್ಗೆ 10.30 ಗಂಟೆಗೆ ಮತ್ತು ಸಂಜೆ 4ರಿಂದ 5ಗಂಟೆವರೆಗೆ. ಅವರು ಎರಡು ಹೊತ್ತು ಊಟ ಹಂಚುತ್ತಿದ್ದು, ಅದು ತಿನ್ನಲಿಕ್ಕೆ ಆಗುತ್ತಿಲ್ಲ ಈಗ ಅದು ಅಲ್ಲೇ ಸಂಗ್ರಹವಾಗಿ ಬೀಳುತ್ತಿದೆ ಎಂದು ಹೇಳಿದ್ದಾರೆ.
ಬೇರೆ ಸಂಘಟನೆಯವರು ಊಟ ಹಂಚುವ ಸಂದರ್ಭದಲ್ಲಿ ತಮ್ಮ ಊಟ ಹೇಗಿದೆ ಎಂದು ವಿಚಾರಿಸಿದಾಗ, ಅಲೆಮಾರಿ ಜನಾಂಗದ ಮಹಿಳೆ, ನಿಮ್ಮ ಊಟ ಸಣ್ಣ ಅಕ್ಕಿಯಿಂದ ರುಚಿಕರವಾಗಿ ಮಾಡಲ್ಪಟ್ಟಿದೆ. ಹೀಗಾಗಿ, ಮಕ್ಕಳು ಇಷ್ಟಪಟ್ಟು ತಿನ್ನುತ್ತಿದ್ದಾರೆ ನೋಡಿ ಎಂದು ಮಕ್ಕಳು ಊಟ ಮಾಡುತ್ತಿರುವುದನ್ನು ತೋರಿಸಿದ್ದಾರೆ. ಊಟ ಹಂಚಿದರೆ ಉತ್ತಮ ಗುಣಮಟ್ಟದ ಆಹಾರ ಹಂಚಬೇಕು. ಹಾಗಿದ್ದಾಗ ಮಾತ್ರ ನಾವೆಲ್ಲರೂ ತಿನ್ನುವುದಕ್ಕೆ ಸಾಧ್ಯವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಚಿವ ಪ್ರಭು ಚೌಹಾಣ್ ಅವರು ಕಳೆದ 15 ದಿನಗಳಿಂದ ತಮ್ಮ ಕ್ಷೇತ್ರವಾಗಿರುವ ಔರಾದ್ ಹಾಗೂ ಕಮಲನಗರ್ ಪಟ್ಟಣಗಳಲ್ಲಿ ಬಡವರಿಗೆ ಅನಾಥರಿಗೆ ಮತ್ತು ಕಾರ್ಮಿಕರಿಗೆ ಆಹಾರ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.







