ಶೀಘ್ರವಾಗಿ ಟಗ್ ತೆರವುಗೊಳಿಸದಿದ್ದಲ್ಲಿ ಹೋರಾಟ: ಮೊಗವೀರ ಸಭಾ
ಪಡುಬಿದ್ರಿ: ಪಡುಬಿದ್ರಿಯ ಕಾಡಿಪಟ್ಣ ಶ್ರೀ ವಿಷ್ಣು ಭಜನಾ ಮಂದಿರ ಬಳಿ ಸಮುದ್ರ ತೀರದಲ್ಲಿ ಪತ್ತೆಯಾದ ಅಲಯೆನ್ಸ್ ಟಗ್ ಶೀಘ್ರದಲ್ಲಿ ತೆರವುಗೊಳಿಸದಿದ್ದಲ್ಲಿ ಹೋರಾಟದ ಹಾದಿ ಹಿಡಿಯಬೇಕಾದೀತು ಎಂದು ಕಾಡಿಪಟ್ಣ ಮೊಗವೀರ ಸಭಾ ಎಚ್ಚರಿಸಿದೆ.
ಟಗ್ ತೆರವುಗೊಳಿಸಲು ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ಶ್ರೀ ವಿಷ್ಣು ಭಜನಾ ಮಂದಿರದಲ್ಲಿ ಸಭಾದ ಸದಸ್ಯರು ತುರ್ತು ಸಭೆ ನಡೆಸಿ ಈ ಬಗ್ಗೆ ಚರ್ಚೆ ನಡೆಸಿದ ಬಳಿಕ ಮಹಾಸಭಾದ ಅಧ್ಯಕ್ಷ ಲೀಲಾಧರ ಸಾಲ್ಯಾನ್ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.
ಅನಾದಿ ಕಾಲದಿಂದಲೂ ಈ ಭಾಗದಲ್ಲಿ ಮಳೆಗಾಲದ ಸಾಂಪ್ರದಾಯಿಕ ನಾಡದೋಣಿ ಮೀನುಗಾರಿಕೆ ನಡೆಸಲಾಗುತ್ತದೆ. ಇದೀಗ ಅದೇ ಪ್ರದೇಶದಲ್ಲಿ ಟಗ್ ಇರುವ ಕಾರಣ ಮಳೆಗಾಲದ ಸಾಂಪ್ರದಾಯಿಕ ಮೀನುಗಾರಿಕೆ ಅಸಾಧ್ಯವಾಗಿದೆ.
ಮೇ 15ರಂದು ತೌಕ್ತೆ ಚಂಡಮಾರುತದ ಆರ್ಭಟಕ್ಕೆ ಕಾಡಿಪಟ್ಣ ಬಳಿ ಸಮುದ್ರ ತೀರದಲ್ಲಿ ಟಗ್ ಮಗುಚಿದ ರೀತಿಯಲ್ಲಿ ಪತ್ತೆಯಾಗಿತ್ತು. ಅದನ್ನು ಮೇ 25ರಂದು ನೇರಗೊಳಿಸಿತ್ತು. ಆದರೆ 6 ದಿನ ಕಳೆದರೂ ಟಗ್‍ನ್ನು ಮಂಗಳೂರಿಗೆ ಕೊಂಡೊಯ್ಯುವ ಕಾರ್ಯ ಆರಂಭವಾಗಿಲ್ಲ. ಈ ಬಗ್ಗೆ ಶಂಕೆ ವ್ಯಕ್ತಪಡಿಸಿರುವ ಮಹಾಸಭಾವು, ಟಗ್‍ನ್ನು ಇಲ್ಲೇ ದಡದಲ್ಲಿ ಉಳಿಸಿ ಬ್ರೇಕ್ ಮಾಡಬಹುದು ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ. ಹಾಗೇನಾದರೂ ಅದಲ್ಲಿ ಯಾವುದೇ ಕಾರಣಕ್ಕೂ ನಾವು ಅವಕಾಶ ನೀಡುವುದಿಲ್ಲ ಎಂದವರು ಎಚ್ಚರಿಸಿದ್ದಾರೆ.





