"ದ್ವೀಪವು ವಾಸಯೋಗ್ಯವಾಗಿಲ್ಲ": ರೊಹಿಂಗ್ಯಾ ನಿರಾಶ್ರಿತರಿಂದ ಪ್ರತಿಭಟನೆ

ಢಾಕಾ (ಬಾಂಗ್ಲಾದೇಶ), ಮೇ 31: ಬಾಂಗ್ಲಾದೇಶಕ್ಕೆ ಸೇರಿದ ಚಂಡಮಾರುತ ಪೀಡಿತ ದ್ವೀಪವು ವಾಸಯೋಗ್ಯವಾಗಿಲ್ಲ ಎಂದು ಆರೋಪಿಸಿ ಸಾವಿರಾರು ರೊಹಿಂಗ್ಯಾ ನಿರಾಶ್ರಿತರು ಸೋಮವಾರ ಪ್ರತಿಭಟನೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಂಗ್ಲಾದೇಶದ ಕಾಕ್ಸ್ ಬಝಾರ್ನಿಂದ ಭಾಶನ್ ಚಾರ್ ದ್ವೀಪಕ್ಕೆ ಕೆಲವು ತಿಂಗಳುಗಳ ಹಿಂದೆ ಸಾವಿರಾರು ರೊಹಿಂಗ್ಯಾ ನಿರಾಶ್ರಿತರನ್ನು ಸ್ಥಳಾಂತರಿಸಲಾಗಿತ್ತು.
ಬಂಗಾಳ ಕೊಲ್ಲಿಯಲ್ಲಿ ಹೂಳಿನಿಂದ ನಿರ್ಮಾಣಗೊಂಡಿರುವ ಭಾಶನ್ ಚಾರ್ ದ್ವೀಪಕ್ಕೆ ಡಿಸೆಂಬರ್ನಿಂದ 18,000 ರೊಹಿಂಗ್ಯಾ ನಿರಾಶ್ರಿತರನ್ನು ಸಾಗಿಸಲಾಗಿದೆ. ಒಂದು ಲಕ್ಷ ನಿರಾಶ್ರಿತರನ್ನು ಅಲ್ಲಿಗೆ ಸಾಗಿಸುವ ಯೋಜನೆಯನ್ನು ಬಾಂಗ್ಲಾದೇಶ ಹೊಂದಿದೆ.
ಕಾಕ್ಸ್ ಬಝಾರ್ನಲ್ಲಿ ಸುಮಾರು 8.5 ಲಕ್ಷ ರೊಹಿಂಗ್ಯಾ ನಿರಾಶ್ರಿತರು ಕಿಕ್ಕಿರಿದ ಶಿಬಿರಗಳಲ್ಲಿ ಅನಾರೋಗ್ಯಕರ ಪರಿಸರದಲ್ಲಿ ವಾಸಿಸುತ್ತಿದ್ದಾರೆ. ಅಲ್ಲಿನ ಶಿಬಿರಗಳ ಒತ್ತಡವನ್ನು ಕೊಂಚ ನಿವಾರಿಸುವುದಕ್ಕಾಗಿ ಒಂದು ಭಾಗ ನಿರಾಶ್ರಿತರನ್ನು ಬಾಂಗ್ಲಾದೇಶವು ದ್ವೀಪದಲ್ಲಿ ನಿರ್ಮಿಸಲಾಗಿರುವ ಶಿಬಿರಗಳಿಗೆ ಕಳುಹಿಸುತ್ತಿದೆ.
ಈ ಪೈಕಿ ಹೆಚ್ಚಿನವರು 2017ರಲ್ಲಿ ನೆರೆಯ ಮ್ಯಾನ್ಮಾರ್ನಲ್ಲಿ ಸೇನೆ ನಡೆಸಿದ ಅಮಾನುಷ ದಮನ ಕಾರ್ಯಾಚರಣೆಯ ವೇಳೆ ತಪ್ಪಿಸಿಕೊಂಡು ಬಾಂಗ್ಲಾದೇಶಕ್ಕೆ ಬಂದವರು. ‘‘ಜನಾಂಗೀಯ ಹತ್ಯೆ’’ಯ ಉದ್ದೇಶದಿಂದ ಸೇನಾ ಕಾರ್ಯಾಚರಣೆಯನ್ನು ನಡೆಸಲಾಗಿದೆ ಎಂಬುದಾಗಿ ವಿಶ್ವಸಂಸ್ಥೆಯ ತನಿಖೆಗಾರರು ಹೇಳಿದ್ದಾರೆ.
ಸೋಮವಾರದ ಪ್ರತಿಭಟನೆಯಲ್ಲಿ ಸುಮಾರು 4,000 ಮಮದಿ ಭಾಗವಹಿಸಿದರು ಎಂದು ಪೊಲಿಸರು ತಿಳಿಸಿದ್ದಾರೆ. ವಿಶ್ವಸಂಸ್ಥೆಯ ನಿರಾಶ್ರಿತರ ಹೈಕಮಿಶನರ್ (ಯುಎನ್ಎಚ್ಸಿಆರ್)ನ ಅಧಿಕಾರಿಗಳು ಪರಿಶೀಲನೆಗಾಗಿ ಬಂದ ಸಂದರ್ಭದಲ್ಲಿ ಪ್ರತಿಭಟನೆ ನಡೆದಿದೆ.
‘‘ಯುಎನ್ಎಚ್ಸಿಆರ್ ಪ್ರತಿನಿಧಿಗಳು ಇಂದು ಹೆಲಿಕಾಪ್ಟರ್ನಲ್ಲಿ ಆಗಮಿಸಿದ ಕ್ಷಣದಲ್ಲೇ ಅಲ್ಲಿದ್ದ ರೊಹಿಂಗ್ಯಾ ನಿರಾಶ್ರಿತರು ಹಿಂಸಾತ್ಮಕವಾಗಿ ವರ್ತಿಸಿದರು’’ ಎಂದು ಸ್ಥಳೀಯ ಪೊಲೀಸ್ ಮುಖ್ಯಸ್ಥ ಅಲಮ್ಗಿರ್ ಹುಸೈನ್ ಎಎಫ್ಪಿ ಸಂಸ್ಥೆಗೆ ತಿಳಿಸಿದರು.
‘‘ಅವರು ಉಗ್ರಾಣಗಳ ಕಿಟಿಕಿ ಗಾಜುಗಳನ್ನು ಕಲ್ಲು ಹೊಡೆದು ಒಡೆದರು. ಅವರು ಪೊಲೀಸರ ಮೇಲೆಯೇ ಏರಿ ಬಂದರು. ತಾವು ಅಲ್ಲಿ ವಾಸಿಸುವುದಿಲ್ಲ ಎನ್ನುವುದು ಅವರ ಬೇಡಿಕೆಯಾಗಿದೆ’’ ಎಂದರು.
ಬೆದರಿಸಿ ದ್ವೀಪಕ್ಕೆ ಸಾಗಿಸಲಾಗಿದೆ ಎಂದಿದ್ದ ನಿರಾಶ್ರಿತರು:
ರೊಹಿಂಗ್ಯಾ ನಿರಾಶ್ರಿತರ ಮೊದಲ ತಂಡವನ್ನು ಡಿಸೆಂಬರ್ 4ರಂದು ದ್ವೀಪಕ್ಕೆ ಸಾಗಿಸಲಾಗಿತ್ತು. ತಮಗೆ ಹೊಡೆದು ಬೆದರಿಸಿ ದ್ವೀಪಕ್ಕೆ ಹೋಗಲು ತಮ್ಮಿಂದ ಒಪ್ಪಿಗೆ ಪಡೆಯಲಾಗಿದೆ ಎಂಬುದಾಗಿ ಹಲವು ರೊಹಿಂಗ್ಯಾಗಳು ಎಎಫ್ಪಿ ಸುದ್ದಿಸಂಸ್ಥೆಗೆ ಹೇಳಿದ್ದರು.
ಮಾನವಹಕ್ಕುಗಳ ಸಂಘಟನೆಗಳೂ ಇದನ್ನು ದೃಢೀಕರಿಸಿವೆ.
ಈ ಆರೋಪಗಳನ್ನು ಬಾಂಗ್ಲಾದೇಶ ಸರಕಾರ ನಿರಾಕರಿಸಿದೆ. ದ್ವೀಪವು ಸುರಕ್ಷಿತವಾಗಿದೆ ಹಾಗೂ ಅಲ್ಲಿನ ಸವಲತ್ತುಗಳು ಕಾಕ್ಸ್ ಬಝಾರ್ನಲ್ಲಿರುವ ಶಿಬಿರಗಳಿಗಿಂತ ಎಷ್ಟೋ ಉತ್ತಮವಾಗಿವೆ ಎಂದು ಹೇಳಿದೆ. ಸ್ಥಳಾಂತರ ಪ್ರಕ್ರಿಯೆಯಲ್ಲಿ ತಾನು ಒಳಗೊಂಡಿಲ್ಲ ಎಂದು ವಿಶ್ವಸಂಸ್ಥೆ ಹೇಳಿದೆ.







