ಆ್ಯಂಜೆಲಾ ಮರ್ಕೆಲ್, ಯುರೋಪ್ ರಾಜಕಾರಣಿಗಳ ಮೇಲೆ ಅಮೆರಿಕ ಬೇಹುಗಾರಿಕೆ
ಡೆನ್ಮಾರ್ಕ್ ಗುಪ್ತಚರ ಇಲಾಖೆಯ ನೆರವು

ಕೋಪನ್ಹೇಗನ್ (ಡೆನ್ಮಾರ್ಕ್), ಮೇ 31: ಅಮೆರಿಕವು 2012ರಿಂದ 2014ರವರೆಗೆ ಡೆನ್ಮಾರ್ಕ್ ಗುಪ್ತಚರ ಇಲಾಖೆಯ ನೆರವಿನಿಂದ ಜರ್ಮನ್ ಚಾನ್ಸಲರ್ ಆ್ಯಂಜೆಲಾ ಮರ್ಕೆಲ್ ಸೇರಿದಂತೆ ಯುರೋಪ್ನ ಉನ್ನತ ರಾಜಕಾರಣಿಗಳ ಮೇಲೆ ಬೇಹುಗಾರಿಕೆ ನಡೆಸಿತ್ತು ಎಂದು ಡೆನ್ಮಾರ್ಕ್ ಮತ್ತು ಯುರೋಪ್ನ ಮಾಧ್ಯಮಗಳು ರವಿವಾರ ವರದಿ ಮಾಡಿವೆ.
ಜರ್ಮನಿ, ಸ್ವೀಡನ್, ನಾರ್ವೆ ಮತ್ತು ಫ್ರಾನ್ಸ್ನ ಉನ್ನತ ರಾಜಕಾರಣಿಗಳು ಮತ್ತು ಹಿರಿಯ ಅಧಿಕಾರಿಗಳ ಮೇಲೆ ಬೇಹುಗಾರಿಕೆ ನಡೆಸಲು ಅಮೆರಿಕದ ನ್ಯಾಶನಲ್ ಸೆಕ್ಯುರಿಟಿ ಏಜನ್ಸಿ (ಎನ್ಎಸ್ಎ) ಡೆನ್ಮಾರ್ಕ್ನ ಇಂಟರ್ನೆಟ್ ಕೇಬಲ್ಗಳ ಮೇಲೆ ಕಳ್ಳಗಿವಿ ಇಟ್ಟಿತ್ತು ಎಂದು ಡೆನ್ಮಾರ್ಕ್ನ ಸರಕಾರಿ ಮಾಧ್ಯಮ ಡೆನ್ಮಾರ್ಕ್ಸ್ ರೇಡಿಯೊ ಹೇಳಿದೆ.
ಎನ್ಎಸ್ಎಯು ಡೆನ್ಮಾರ್ಕ್ ನ ಸೇನಾ ಗುಪ್ತಚರ ಘಟಕ ಎಫ್ಇ ಜೊತೆಗೆ ಕಣ್ಗಾವಲು ಸಹಯೋಗವನ್ನು ಹೊಂದಿತ್ತು. ಇದರ ಪ್ರಯೋಜನವನ್ನು ಬೇಹುಗಾರಿಕೆ ನಡೆಸುವುದಕ್ಕಾಗಿ ಅದು ಬಳಸಿಕೊಂಡಿತು ಎಂದು ರೇಡಿಯೊ ಹೇಳಿದೆ. ಡೆನ್ಮಾರ್ಕ್ ರಕ್ಷಣಾ ಸಚಿವೆ ಟ್ರೈನ್ ಬ್ರಾಮ್ಸೆನ್ 2019ರ ಜೂನ್ನಲ್ಲಿ ತನ್ನ ಖಾತೆಯನ್ನು ವಹಿಸಿಕೊಂಡಿದ್ದಾರೆ. ಅವರಿಗೆ ಬೇಹುಗಾರಿಕೆಯ ವಿಷಯವನ್ನು 2020 ಆಗಸ್ಟ್ ನಲ್ಲಿ ತಿಳಿಸಲಾಗಿತ್ತು ಎಂದು ಅದು ತಿಳಿಸಿದೆ.
ಆಪ್ತ ಮಿತ್ರರ ಮೇಲೆ ವ್ಯವಸ್ಥಿತ ಕಳ್ಳಗಿವಿ ಇಡುವುದು ಸ್ವೀಕಾರಾರ್ಹವಲ್ಲ ಎಂದು ರೇಡಿಯೊದೊಂದಿಗೆ ಮಾತನಾಡಿದ ಅವರು ಹೇಳಿದ್ದಾರೆ.
ನೆರೆಯ ದೇಶಗಳ ಮೇಲೆ ಬೇಹುಗಾರಿಕೆ ನಡೆಸುವುದಕ್ಕಾಗಿ ತನ್ನ ಕಣ್ಗಾವಲು ವ್ಯವಸ್ಥೆಯನ್ನು ಬಳಸಿಕೊಳ್ಳಲು ಡೆನ್ಮಾರ್ಕ್ ಅಮೆರಿಕಕ್ಕೆ ಅಧಿಕಾರ ನೀಡಿತ್ತೆ ಎನ್ನುವುದು ಸ್ಪಷ್ಟವಾಗಿಲ್ಲ.
ಈ ವಿಷಯದ ಬಗ್ಗೆ ಸ್ವೀಡನ್ನ ಸರಕಾರಿ ಪ್ರಸಾರ ಸಂಸ್ಥೆ ಎಸ್ವಿಟಿ, ನಾರ್ವೆಯ ಎನ್ಆರ್ಕೆ, ಜರ್ಮನಿಯ ಎನ್ಡಿಆರ್, ಡಬ್ಲ್ಯುಡಿಆರ್ ಮತ್ತು ಸಡಾಶ್ ಝೈಟಂಗ್ ಹಾಗೂ ಫ್ರಾನ್ಸ್ನ ಲೆ ಮೋಂಡ್ ಮಾಧ್ಯಮಗಳ ಜೊತೆಗೂಡಿ ಡೆನ್ಮಾರ್ಕ್ ರೇಡಿಯೊ ತನಿಖೆ ನಡೆಸಿತ್ತು.
ಎನ್ಎಸ್ಎಯ ಬೇಹುಗಾರಿಕೆಗೆ ಒಳಗಾದವರಲ್ಲಿ ಜರ್ಮನ್ ಚಾನ್ಸಲರ್ ಆ್ಯಂಜೆಲಾ ಮರ್ಕೆಲ್, ಅಂದಿನ ವಿದೇಶ ಸಚಿವ ಫ್ರಾಂಕ್-ವಾಲ್ಟರ್ ಸ್ಟೈನ್ಮಿಯರ್ ಮತ್ತು ಅಂದಿನ ಪ್ರತಿಪಕ್ಷ ನಾಯಕ ಪೀರ್ ಸ್ಟೈನ್ಬ್ರಕ್ ಸೇರಿದ್ದಾರೆ ಎಂದು ಡೆನ್ಮಾರ್ಕ್ ರೇಡಿಯೊ ಹೇಳಿದೆ.
ಎಸ್ಎಮ್ಎಸ್ ಅಕ್ಷರ ಸಂದೇಶಗಳು, ಟೆಲಿಫೋನ್ ಕರೆಗಳು ಮತ್ತು ಸರ್ಚ್, ಸಂವಾದ ಮತ್ತು ಸಂದೇಶಗಳು ಸೇರಿದಂತೆ ಇಂಟರ್ನೆಟ್ ಟ್ರಾಫಿಕ್ನ ಮಾಹಿತಿಗಳು ಎನ್ಎಸ್ಎಗೆ ಲಭಿಸುತ್ತಿತ್ತು.
ಬೇಹುಗಾರಿಕೆಯಿಂದ ಸಂಗ್ರಹಿಸಿದ ಮಾಹಿತಿಗಳನ್ನು ಡೆನ್ಮಾರ್ಕ್ ಸೇನಾ ಗುಪ್ತಚರ ಘಟಕ ಎಫ್ಇನ ಆಂತರಿಕ ರಹಸ್ಯ ವರದಿಯಲ್ಲಿ ದಾಖಲಿಸಲಾಗಿತ್ತು. ವರದಿಯನು ಎಫ್ಇನ ಉನ್ನತ ನಾಯಕತ್ವಕ್ಕೆ 2015 ಮೇ ತಿಂಗಳಲ್ಲಿ ಸಲ್ಲಿಸಲಾಗಿತ್ತು.







