ಐಟಿ ನಿಯಮದ ಪ್ರಕಾರ ಅಹವಾಲು ಅಧಿಕಾರಿ ನಿಯೋಜಿಸಲಾಗಿದೆ: ದಿಲ್ಲಿ ಉಚ್ಚ ನ್ಯಾಯಾಲಯಕ್ಕೆ ತಿಳಿಸಿದ ಟ್ವಿಟರ್

ಹೊಸದಿಲ್ಲಿ, ಮೇ 31: ಸ್ಥಾನಿಕ ಅಹವಾಲು ಅಧಿಕಾರಿ ನೇಮಕ ಕುರಿತಂತೆ ದಾಖಲೆ ಸಲ್ಲಿಸಲು ದಿಲ್ಲಿ ಹೈಕೋರ್ಟ್ ಸೋಮವಾರ ಟ್ವಿಟ್ಟರ್ಗೆ ಮೂರು ವಾರಗಳ ಕಾಲಾವಕಾಶ ನೀಡಿದೆ. ಅಮೆರಿಕ ಮೂಲದ ಕಂಪೆನಿ ಟ್ವಿಟ್ಟರ್ ಐಟಿ ನಿಯಮಗಳನ್ನು ಅನುಸರಿಸಿಲ್ಲ ಎಂದು ಆರೋಪಿಸಿ ಸಲ್ಲಿಸಿದ ಮನವಿಗೆ ಸಂಬಂಧಿಸಿ ದಿಲ್ಲಿ ಉಚ್ಚ ನ್ಯಾಯಾಲಯ ಟ್ವಿಟ್ಟರ್ ಹಾಗೂ ಕೇಂದ್ರ ಸರಕಾರಕ್ಕೆ ನೋಟಿಸು ಜಾರಿ ಮಾಡಿತ್ತು. ನಿಯಮಗಳನ್ನು ಅನುಸರಿಸಿ ಮೇ 28ರಂದು ಅಹವಾಲು ಅಧಿಕಾರಿಯನ್ನು ನೇಮಕ ಮಾಡಲಾಗಿದೆ ಎಂದು ಟ್ವಿಟ್ಟರ್ ನ್ಯಾಯಾಲಯಕ್ಕೆ ತಿಳಿಸಿದೆ. ನ್ಯಾಯಮೂರ್ತಿ ರೇಖಾ ಪಳ್ಳಿ ಅವರು ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಜುಲೈ 6ಕ್ಕೆ ನಿಗದಿಪಡಿಸಿದ್ದಾರೆ.
ಇಬ್ಬರು ದೃಢೀಕೃತ ಬಳಕೆದಾರರು ಮಾನಹಾನಿಕರ, ಸುಳ್ಳು ಟ್ವೀಟ್ಗಳನ್ನು ಮಾಡಿದ್ದಾರೆ ಹಾಗೂ ತಾನು ಈ ವಿಷಯವನ್ನು ಸ್ಥಾನಿಕ ಅಹವಾಲು ಅಧಿಕಾರಿಯ ಮುಂದೆ ಎತ್ತಲು ಬಯಸುತ್ತೇನೆ ಎಂದು ಪ್ರತಿಪಾದಿಸಿ ವಕೀಲ ಅಮಿತ್ ಆಚಾರ್ಯ ಅವರು ವಕೀಲರಾದ ಆಕಾಶ್ ವಾಜಪೇಯಿ ಹಾಗೂ ಮನೀಷ್ ಕುಮಾರ್ ಮೂಲಕ ಮೇ 26ರಂದು ಮನವಿ ಸಲ್ಲಿಸಿದ್ದರು.
ಟಿಎಂಸಿ ಸಂಸದೆ ಮಹುಆ ಮೊಯಿತ್ರಾ ಹಾಗೂ ಪತ್ರಕರ್ತೆ ಸ್ವಾತಿ ಚತುರ್ವೇದಿ ಅವರು ಈ ಆಕ್ಷೇಪಾರ್ಹ ಟ್ವೀಟ್ ಗಳನ್ನು ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ‘‘ಆದರೆ, ತನ್ನ ಅಹವಾಲು ಸಲ್ಲಿಸಲು ಟ್ವಿಟ್ಟರ್ ವೆಬ್ಸೈಟ್ ನ ಸ್ಥಾನಿಕ ಅಹವಾಲು ಅಧಿಕಾರಿಯ ಸಂಪರ್ಕ ವಿವರ ಪಡೆಯಲು ಸಾಧ್ಯವಾಗಿಲ್ಲ’’ ಎಂದು ಹೇಳಿರುವ ದೂರಿನಲ್ಲಿ, ಟ್ವೀಟ್ಗೆ ಸಂಬಂಧಿಸಿ ಟ್ವಿಟ್ಟರ್ ಗೆ ಇಮೇಲ್ ಅನ್ನು ಕೂಡ ಕಳುಹಿಸಲಾಗಿದೆ ಎಂದಿದೆ.
ಟ್ವಟ್ಟರ್ ಅಮೆರಿಕದ ನಿವಾಸಿಯನ್ನು ಅಹವಾಲು ಅಧಿಕಾರಿಯನ್ನಾಗಿ ನಿಯೋಜಿಸಿದೆ. ಆದರೆ, ಇದು ನಿಜಾರ್ಥದಲ್ಲಿ ಮಾಹಿತಿ ತಂತ್ರಜ್ಞಾನ ಕಾಯ್ದೆ 2021 ಕಾಯ್ದೆಯ ಅನುಷ್ಠಾನವಲ್ಲ ಎಂದು ಕೂಡ ಮನವಿ ಪ್ರತಿಪಾದಿಸಿದೆ. ಸ್ಥಾನಿಕ ಅಹವಾಲು ಅಧಿಕಾರಿಯ ಮುಂದೆ ಮಾನಹಾನಿಕರ, ಸುಳ್ಳು ಟ್ವೀಟ್ ಹಾಗೂ ಟ್ವಿಟ್ಟರ್ ನ ಪೋಸ್ಟ್ ವಿರುದ್ಧ ಆಕ್ಷೇಪ ಎತ್ತಲು ಹಾಗೂ ದೂರು ನೀಡಲು ಮಾಹಿತಿ ತಂತ್ರಜ್ಞಾನ ಕಾಯ್ದೆ 2021ರ ಅಡಿಯಲ್ಲಿ ಕಾನೂನಾತ್ಮಕ ಹಕ್ಕು ದೂರುದಾರರಿಗೆ ಇದೆ ಎಂದು ಮನವಿ ಹೇಳಿದೆ.







