ಮಧ್ಯಪ್ರದೇಶ: ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ 3,000 ಕಿರಿಯ ವೈದ್ಯರಿಂದ ಪ್ರತಿಭಟನೆ
ಭೋಪಾಲ, ಮೇ 31: ಒಂದು ವೇಳೆ ತಾವು ಅಥವಾ ತಮ್ಮ ಕುಟುಂಬದ ಸದಸ್ಯರು ಕೊರೋನ ಸೋಂಕಿಗೆ ಒಳಗಾದರೆ ಉಚಿತ ಚಿಕಿತ್ಸೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದ ಮಧ್ಯಪ್ರದೇಶದ ಸುಮಾರು 3,000 ವೈದ್ಯರು ಸೋಮವಾರ ಕೊರೋನ ಚಿಕಿತ್ಸೆಯ ಕರ್ತವ್ಯ ಹೊರತುಪಡಿಸಿ ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದರು.
ಆಸ್ಪತ್ರೆಗಳ ಹೊರ ರೋಗಿಗಳ ವಿಭಾಗ, ಒಳರೋಗಿಗಳ ವಿಭಾಗ ಹಾಗೂ ಇತರ ವಾರ್ಡ್ಗಳಲ್ಲಿ ತಮ್ಮ ಸದಸ್ಯರು ಕರ್ತವ್ಯ ಸ್ಥಗಿತಗೊಳಿಸಿದ್ದಾರೆ ಎಂದು ಮಧ್ಯಪ್ರದೇಶದ ಕಿರಿಯ ವೈದ್ಯರ ಸಂಘಟನೆಯ ಅಧ್ಯಕ್ಷ ಅರವಿಂದ ಮೀನಾ ಅವರು ತಿಳಿಸಿದ್ದಾರೆ. ಒಂದು ವೇಳೆ ತಮ್ಮ ಬೇಡಿಕೆಗಳನ್ನು ಈಡೇರಿಸದೇ ಇದ್ದರೆ, ಜೂನ್ 1ರಿಂದ ದೇಶಾದ್ಯಂತ ಕೋವಿಡ್ ಚಿಕಿತ್ಸೆ ಕರ್ತವ್ಯವನ್ನು ಕೂಡ ಸ್ಥಗಿತಗೊಳಿಸಲಿದ್ದೇವೆ ಎಂದು ಅವರು ಹೇಳಿದ್ದಾರೆ.
ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಕಿರಿಯ ವೈದ್ಯರು ಕೊರೋನ ಸೋಂಕಿಗೆ ಒಳಗಾದರೆ ಅವರಿಗೆ ಪ್ರತ್ಯೇಕ ಪ್ರದೇಶದಲ್ಲಿ ಹಾಸಿಗೆ ಕಾಯ್ದಿರಿಸಬೇಕು. ಕಿರಿಯ ವೈದ್ಯರಿಗೆ ಹಾಗೂ ಅವರ ಕುಟುಂಬದ ಸದಸ್ಯರಿಗೆ ಉಚಿತ ಚಿಕಿತ್ಸೆ ನೀಡಬೇಕು. ಅಲ್ಲದೆ ಶಿಷ್ಯವೇತನ ಪರಿಷ್ಕರಿಸಬೇಕು ಎಂದು ಮೀನಾ ಆಗ್ರಹಿಸಿದ್ದಾರೆ. ರಾಜ್ಯಾದ್ಯಂತದ 6 ವ್ಯೆದ್ಯಕೀಯ ಕಾಲೇಜುಗಳಲ್ಲಿ ನಮ್ಮ ಸಂಘಟನೆಗೆ ಸೇರಿದ 3,000 ಸದಸ್ಯರು ಇದ್ದಾರೆ ಎಂದು ಅರವಿಂದ ಮೀನಾ ತಿಳಿಸಿದ್ದಾರೆ.