ಕೊರೋನ ಚಿಕಿತ್ಸೆಗೆ 5 ಲಕ್ಷ ರೂ. ಸಾಲ: ಬ್ಯಾಂಕ್ ಗಳ ಘೋಷಣೆ

ಹೊಸದಿಲ್ಲಿ, ಮೇ 31: ಕೊರೋನ ಚಿಕಿತ್ಸೆಯ ವೆಚ್ಚ ಭರಿಸಲು 25,000 ರೂ.ಯಿಂದ 5 ಲಕ್ಷ ರೂ.ವರೆಗಿನ ಅಸುರಕ್ಷಿತ ಸಾಲ(ಅನ್ಸೆಕ್ಯೂರ್ಡ್ ಲೋನ್) ಒದಗಿಸಲು ನಿರ್ಧರಿಸಲಾಗಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್ ಹೇಳಿದೆ. ವೇತನದಾರರಿಗೆ, ವೇತನ ರಹಿತರಿಗೆ ಮತ್ತು ಪಿಂಚಣಿ ಪಡೆಯುವವರಿಗೆ ಈ ಪ್ರಯೋಜನ ದೊರಕಲಿದೆ.
ಜೊತೆಗೆ, ಆರ್ಬಿಐ ಮಾರ್ಗಸೂಚಿಯ ಪ್ರಕಾರ, ಎಮರ್ಜೆನ್ಸಿ ಕ್ರೆಡಿಟ್ಲೈನ್ ಗ್ಯಾರಂಟಿ ಯೋಜನೆಯಡಿ ಆಮ್ಲಜನಕ ಘಟಕ ಸ್ಥಾಪಿಸಲು ಆಸ್ಪತ್ರೆಗಳಿಗೆ, ನರ್ಸಿಂಗ್ ಹೋಂಗಳಿಗೆ 7.5% ಬಡ್ಡಿದರಲ್ಲಿ 2 ಕೋಟಿ ರೂ.ವರೆಗೆ ಸಾಲ ನೀಡಲಾಗುವುದು. ಆರೋಗ್ಯರಕ್ಷಕ ವ್ಯವಸ್ಥೆ ಯೋಜನೆಯಡಿ ಆರೋಗ್ಯಕ್ಷೇತ್ರದ ಮೂಲಸೌಕರ್ಯ ಸ್ಥಾಪಿಸಲು ಅಥವಾ ಅಭಿವೃದ್ಧಿಗೊಳಿಸಲು , ಆರೋಗ್ಯಕ್ಷೇತ್ರದ ಉತ್ಪನ್ನ ತಯಾರಿಸಲು 100 ಕೋಟಿ ರೂ.ವರೆಗೆ ಸಾಲ ನೀಡಲಾಗುವುದು.
ಕೊರೋನ ಸೋಂಕು ಉಲ್ಬಣಗೊಂಡು ತೀವ್ರ ಆರ್ಥಿಕ ಸಮಸ್ಯೆ ಎದುರಿಸುತ್ತಿರುವವರಿಗೆ ಈ ಉಪಕ್ರಮದಿಂದ ಪ್ರಯೋಜನವಾಗಲಿದೆ ಎಂದು ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್ ಹೇಳಿದೆ. ತುರ್ತು ವೈದ್ಯಕೀಯ ಸೇವೆಗಳಿಗೆ ಅಗತ್ಯವಿರುವ ಆರ್ಥಿಕ ನೆರವು ಒದಗಿಸಲು 50,000 ಕೋಟಿ ರೂ. ಮೊತ್ತದ ವಾಯಿದೆ ಸಾಲದ ವ್ಯವಸ್ಥೆ ರೂಪಿಸಿರುವುದಾಗಿ ಈ ಹಿಂದೆ ರಿಸರ್ವ್ ಬ್ಯಾಂಕ್ ಹೇಳಿತ್ತು.