ಸುಶೀಲ್ ಕುಮಾರ್ ಅವರ ಶಸ್ತ್ರಾಸ್ತ್ರ ಪರವಾನಿಗೆ ಅಮಾನತುಗೊಳಿಸಿದ ದಿಲ್ಲಿ ಪೊಲೀಸರು
ಕುಸ್ತಿಪಟು ಕೊಲೆ ಪ್ರಕರಣ

ಹೊಸದಿಲ್ಲಿ: ಛತ್ರಾಸಲ್ ಕ್ರೀಡಾಂಗಣದಲ್ಲಿ ಯುವ ಕುಸ್ತಿಪಟು ಸಾಗರ್ ಧಂಕರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಹಿರಿಯ ಕುಸ್ತಿಪಟು ಸುಶೀಲ್ ಕುಮಾರ್ ಅವರ ಶಸ್ತ್ರಾಸ್ತ್ರ ಪರವಾನಗಿಯನ್ನು ಅಮಾನತುಗೊಳಿಸಲಾಗಿದೆ ಎಂದು ದಿಲ್ಲಿ ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ರದ್ದತಿ ಪ್ರಕ್ರಿಯೆಯನ್ನು ಪರವಾನಗಿ ಇಲಾಖೆ ಪ್ರಾರಂಭಿಸಿದೆ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಏತನ್ಮಧ್ಯೆ, ದಿಲ್ಲಿ ಪೊಲೀಸರ ಅಪರಾಧ ವಿಭಾಗವು ರವಿವಾರ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಸುಶೀಲ್ ಕುಮಾರ್ ಅವರನ್ನು ಹರಿದ್ವಾರಕ್ಕೆ ಕರೆದೊಯ್ದಿದೆ.
ಇಲ್ಲಿಯವರೆಗೆ, ಸಾಗರ್ ಧಂಕರ್ ಹತ್ಯೆಯಲ್ಲಿ 13 ಜನರು ಭಾಗಿಯಾಗಿದ್ದಾರೆ ಎಂದು ದಿಲ್ಲಿ ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ, ಅದರಲ್ಲಿ 9 ಜನರನ್ನು ಬಂಧಿಸಲಾಗಿದೆ ಹಾಗೂ ಇತರ ನಾಲ್ವರು ಪರಾರಿಯಾಗಿದ್ದಾರೆ.
38 ವರ್ಷದ ಕುಸ್ತಿಪಟು, ಕೊಲೆ ಪ್ರಕರಣದ ಪ್ರಮುಖ ಶಂಕಿತ ಸುಶೀಲ್ ಕುಮಾರ್ ಹಾಗೂ ಆತನ ಸಹಚರ ಅಜಯ್ ಬಕ್ಕರ್ವಾಲಾ ಅವರನ್ನು ದಿಲ್ಲಿ ಪೊಲೀಸರ ವಿಶೇಷ ಸೆಲ್ ತಂಡವು ಮೇ 23 ರಂದು ರಾಷ್ಟ್ರ ರಾಜಧಾನಿಯ ಮುಂಡ್ಕಾ ಪ್ರದೇಶದಲ್ಲಿ ಬಂಧಿಸಿತ್ತು.
ಪೊಲೀಸರ ಪ್ರಕಾರ, ಬಂಧನವನ್ನು ತಪ್ಪಿಸುವ ಪ್ರಯತ್ನದಲ್ಲಿ, ಕುಮಾರ್ 18 ದಿನಗಳ ಅವಧಿಯಲ್ಲಿ ಏಳು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಗಡಿಗಳನ್ನು ದಾಟಿ ತನ್ನ ಸಿಮ್ ಕಾರ್ಡ್‌ಗಳನ್ನು ನಿರಂತರವಾಗಿ ಬದಲಾಯಿಸಿದ್ದ.







