ಲಾಕ್ ಡೌನ್ ಸಮಯದಲ್ಲಿ 1,200 ಕಿ.ಮೀ. ದೂರ ಸೈಕಲ್ ಓಡಿಸಿದ್ದ ಬಿಹಾರದ ಬಾಲಕಿಯ ತಂದೆ ನಿಧನ

file photo: ANI
ಹೊಸದಿಲ್ಲಿ : ಕಳೆದ ವರ್ಷ ದೇಶಾದ್ಯಂತ ಲಾಕ್ಡೌನ್ ವಿಧಿಸಿದ್ದ ಸಮಯದಲ್ಲಿ ಬಾಲಕಿ ಜ್ಯೋತಿ ಕುಮಾರಿ ದಿಲ್ಲಿಯ ಬಳಿಯ ಗುರ್ಗಾಂವ್ನಿಂದ 1,200 ಕಿಲೋಮೀಟರ್ ದೂರದ ಬಿಹಾರದ ದರ್ಬಾಂಗ್ ಗೆ ಅನಾರೋಗ್ಯಪೀಡಿತ ತನ್ನ ತಂದೆಯನ್ನು ಸೈಕಲ್ ಮೇಲೆ ಕೂರಿಸಿಕೊಂಡು ತೆರಳಿ ದೇಶ-ವಿದೇಶದ ಗಮನ ಸೆಳೆದಿದ್ದರು. 15 ವರ್ಷದ ಬಾಲಕಿಯ ತಂದೆ ಹೃದಯ ಸ್ತಂಭನದಿಂದ ಸೋಮವಾರ ನಿಧನರಾಗಿದ್ದಾರೆ. ದರ್ಬಾಂಗ ಜಿಲ್ಲೆಯ ಸ್ವಗ್ರಾಮ ಸಿರ್ಹುಲಿಯಲ್ಲಿ ಈ ಘಟನೆ ಸಂಭವಿಸಿದೆ.
ಕಳೆದ ವರ್ಷ ಮಾರ್ಚ್ನಲ್ಲಿ ಅಪಘಾತದಿಂದ ಗಾಯಗೊಂಡು ಗುರುಗ್ರಾಮದ ಮನೆಯಲ್ಲಿದ್ದ ಇ-ರಿಕ್ಷಾ ಚಾಲಕ ತನ್ನ ತಂದೆ ಮೋಹನ್ ಪಾಸ್ವಾನ್ ಅವರನ್ನು ಜ್ಯೋತಿ ಕುಮಾರಿ ತನ್ನ ಸೈಕಲ್ ನಲ್ಲಿ ಕೂರಿಸಿಕೊಂಡು ಬಿಹಾರಕ್ಕೆ ಕರೆದೊಯ್ದಿದ್ದಳು. ಸಾಮಾಜಿಕ ತಾಣಗಳಲ್ಲಿ ಜ್ಯೋತಿ ಕುಮಾರಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಅಮೆರಿಕದ ಅಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುತ್ರಿ ಇವಾಂಕಾ ಟ್ರಂಪ್ ಅವರು ಶ್ಲಾಘಿಸಿದ್ದರು.
ಲಾಕ್ಡೌನ್ ಜಾರಿಗೊಳಿಸಿದ ನಂತರ ಸಾರ್ವಜನಿಕ ಸಾರಿಗೆಯು ಸ್ತಬ್ದವಾಗಿತ್ತು. ಆಗ ತನ್ನ ತಂದೆಯೊಂದಿಗೆ ಬಿಹಾರಕ್ಕೆ ಹೊರಟಿದ್ದ ಜ್ಯೋತಿ ಕುಮಾರಿ ಏಳು ದಿನಗಳ ಕಾಲ ಸೈಕಲ್ ತುಳಿದಿದ್ದಳು. ಇಬ್ಬರಿಗೂ ಹಣದ ಸಮಸ್ಯೆ ಇದ್ದ ಕಾರಣ ಸಾಲ ಮಾಡಿ ಸೈಕಲ್ ಖರೀದಿಸಿದ್ದರು.
ಜ್ಯೋತಿ ಕುಮಾರಿ ಅವರ ಗಮನಾರ್ಹ ಸಾಧನೆ ಅವರಿಗೆ ಪ್ರಧಾನ್ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ್ ಗಳಿಸಿಕೊಟ್ಟಿತು. ಬಿಹಾರದ ಲೋಕ ಜನಶಕ್ತಿ ಪಕ್ಷವು ಜ್ಯೋತಿ ಶಿಕ್ಷಣವನ್ನು ಪ್ರಾಯೋಜಿಸಲು ಮುಂದಾಯಿತು. ಜ್ಯೋತಿ ಕುಮಾರಿ ಅವರ ಕುಟುಂಬಕ್ಕೆ ಉತ್ತರ ಪ್ರದೇಶದ ಸಮಾಜವಾದಿ ಪಕ್ಷವು ರೂ. 1 ಲಕ್ಷ ಆರ್ಥಿಕ ನೆರವು ನೀಡಿತ್ತು.







