ಅಲೋಪಥಿ ಪದ್ಧತಿ ಮತ್ತು ವೈದ್ಯರನ್ನು ನಾನು ಗೌರವಿಸುತ್ತೇನೆ: ವರಸೆ ಬದಲಾಯಿಸಿದ ರಾಮ್ ದೇವ್

ಹೊಸದಿಲ್ಲಿ,ಜೂ.1: ಅಲೋಪತಿ ವೈದ್ಯಪದ್ಧತಿಯ ವಿರುದ್ಧ ರಾಮ್ ದೇವ್ ಹೇಳಿಕೆಯನ್ನು ಖಂಡಿಸಿ ವೈದ್ಯ ಸಮುದಾಯವು ಪ್ರತಿಭಟನೆಗಿಳಿದಿರುವ ನಡುವೆಯೇ ತಿಪ್ಪರಲಾಗ ಹೊಡೆದಿರುವ ಯೋಗಗುರು ಹಾಗೂ ಉದ್ಯಮಿ, "ಅಲೋಪತಿ ವೈದ್ಯಶಾಸ್ತ್ರ ಮತ್ತು ಅಲೋಪತಿ ವೈದ್ಯರನ್ನು ತಾನು ಗೌರವಿಸುತ್ತೇನೆ ಹಾಗೂ ವೈದ್ಯಕೀಯ ಕ್ಷೇತ್ರ ಮತ್ತು ಸಮಾಜಕ್ಕೆ ಅವರ ಕೊಡುಗೆಯು ಅಪಾರವಾಗಿದೆ" ಎಂದು ಪ್ರಶಂಸಿಸಿದ್ದಾರೆ.
‘ನಾವು ವೈದ್ಯರ ವಿರುದ್ಧವಾಗಿಲ್ಲ, ನಾವು ಔಷಧಿಗಳನ್ನು ಹೆಚ್ಚಿನ ಬೆಲೆಗಳಲ್ಲಿ ಮಾರಾಟ ಮಾಡುವವರು ಮತ್ತು ರೋಗಿಗಗಳನ್ನು ಆದಾಯ ಗಳಿಕೆಯ ಗ್ರಾಹಕರೆಂದು ಪರಿಗಣಿಸುವವರ ವಿರುದ್ಧವಾಗಿದ್ದೇವೆ. ರೋಗಿಗಳಿಗೆ ಅಗತ್ಯವೇ ಇಲ್ಲದಿದ್ದರೂ ಅನಗತ್ಯವಾಗಿ ವೈದ್ಯಕೀಯ ಪರೀಕ್ಷೆಗಳು, ಶಸ್ತ್ರಚಿಕಿತ್ಸೆಗಳು ಮತ್ತು ದುಬಾರಿ ಔಷಧಿಗಳನ್ನು ಶಿಫಾರಸು ಮಾಡುವವರನ್ನು ನಾವು ವಿರೋಧಿಸುತ್ತೇವೆ’ಎಂದು ಸರಣಿ ಟ್ವೀಟ್ ಗಳಲ್ಲಿ ರಾಮ್ ದೇವ್ ಹೇಳಿದ್ದಾರೆ.
ಆಯುರ್ವೇದ ಮತ್ತು ಅಲೋಪತಿ ಚಿಕಿತ್ಸೆಗಳನ್ನು ಬಳಸಿ ಸಂಯೋಜಿತ ಕಾರ್ಯ ವಿಧಾನಕ್ಕೆ ಕರೆ ನೀಡಿರುವ ಅವರು,ಆರೋಗ್ಯ ರಕ್ಷಣೆ ಹೆಸರಿನಲ್ಲಿ ಹಣವನ್ನು ದೋಚುತ್ತಿರುವ ‘ಡ್ರಗ್ ಮಾಫಿಯಾ’ದ ವಿರುದ್ಧ ಕ್ರಮಕ್ಕೂ ಆಗ್ರಹಿಸಿದ್ದಾರೆ.
‘ಅಲೋಪತಿ-ಆಯುರ್ವೇದ ಹಿರಿಮೆಯ ವಿವಾದವನ್ನು ಅಂತ್ಯಗೊಳಿಸಲು ನಾನು ಬಯಸಿದ್ದೇನೆ ’ ಎಂದಿರುವ ರಾಮ್ ದೇವ್, ‘ನಾವು ಅಲೋಪತಿಯನ್ನು ಗೌರವಿಸುತ್ತೇವೆ ಮತ್ತು ಆಯುರ್ವೇದಕ್ಕೆ ಗೌರವವನ್ನು ನಿರೀಕ್ಷಿಸುತ್ತೇವೆ. ಆಯುರ್ವೇದವನ್ನು ಢೋಂಗಿ ವಿಜ್ಞಾನ ಅಥವಾ ಪರ್ಯಾಯ ಚಿಕಿತ್ಸೆ ಎಂದು ನೋಡಬಾರದು, ಅದು ಶತಮಾನಗಳಿಂದಲೂ ಚಾಲ್ತಿಯಲ್ಲಿರುವ ಪ್ರಾಚೀನ ವೈದ್ಯವಿಜ್ಞಾನವಾಗಿದೆ ಮತ್ತು ಜನರನ್ನು ಗುಣಮುಖರನ್ನಾಗಿಸುತ್ತಿದೆ ಎಂದಿದ್ದಾರೆ.
ಪತಂಜಲಿ ಯೋಗ ಪೀಠದಿಂದ ಲಿಖಿತ ಸ್ಪಷ್ಟನೆಯನ್ನು ಸ್ವೀಕರಿಸಿದ ಬಳಿಕವಷ್ಟೇ ಈ ವಿಷಯದಲ್ಲಿ ಪ್ರತಿಕ್ರಿಯಿಸಲು ಸಾಧ್ಯವಾಗುತ್ತದೆ ಎಂದು ಭಾರತೀಯ ವೈದ್ಯಕೀಯ ಸಂಘ (ಐಎಂಎ)ದ ಉತ್ತರಾಖಂಡ ಘಟಕದ ಪ್ರ.ಕಾರ್ಯದರ್ಶಿ ಡಾ.ಅಜಯ್ ಖನ್ನಾ ಹೇಳಿದ್ದಾರೆ.







