ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾಗಿ ಜಸ್ಟಿಸ್ ಅರುಣ್ ಮಿಶ್ರಾ ಆಯ್ಕೆ ಸಾಧ್ಯತೆ

photo: ThePrint
ಹೊಸದಿಲ್ಲಿ: ಸುಪ್ರೀಂಕೋರ್ಟ್ ನ ಮಾಜಿ ನ್ಯಾಯಾಧೀಶರಾದ ಜಸ್ಟಿಸ್ ಅರುಣ್ ಮಿಶ್ರಾ ಅವರು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ನೂತನ ಅಧ್ಯಕ್ಷರಾಗಿ ನೇಮಕವಾಗುವ ಸಾಧ್ಯತೆ ಇದೆ ಎಂದು ಸರಕಾರದ ಮೂಲಗಳನ್ನು ಉಲ್ಲೇಖಿಸಿ The Hindu ವರದಿ ಮಾಡಿದೆ.
ಜಮ್ಮು-ಕಾಶ್ಮೀರದ ಮಾಜಿ ಮುಖ್ಯ ನ್ಯಾಯಾಧೀಶರಾದ ಮಹೇಶ್ ಮಿತ್ತಲ್ ಕುಮಾರ್ ಹಾಗೂ ಗುಪ್ತಚರ ಸಂಸ್ಥೆಯ ಮಾಜಿ ನಿರ್ದೇಶಕರಾದ ರಾಜೀವ್ ಜೈನ್ ಅವರ ಹೆಸರನ್ನು ಆಯ್ಕೆ ಸಮಿತಿಯು ಶಿಫಾರಸು ಮಾಡಿದೆ. ಆದರೆ ಅಧಿಕೃತ ಅಧಿಸೂಚನೆ ಇನ್ನಷ್ಟೇ ಬರಬೇಕಾಗಿದೆ ಎಂದು ವರದಿ ತಿಳಿಸಿದೆ.
ಆಯ್ಕೆಸಮಿತಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ರಾಜ್ಯಸಭೆಯ ಉಪ ಸಭಾಪತಿ ಹರಿವಂಶ್, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಹಾಗೂ ರಾಜ್ಯಸಭೆಯಲ್ಲಿ ವಿಪಕ್ಷಗಳ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರಿದ್ದಾರೆ.
ತಮ್ಮ ಕಾರ್ಯಾವಧಿಯಲ್ಲೇ ಪ್ರಧಾನಿ ನರೇಂದ್ರ ಮೋದಿಯನ್ನು ಬಹಿರಂಗವಾಗಿ ಹೊಗಳುವ ಮೂಲಕ ಅವರು ಸುದ್ದಿಯಾಗಿದ್ದರು. ಸುಪ್ರೀಂ ಕೋರ್ಟ್ನಲ್ಲಿ ನಡೆದ ಅಂತರರಾಷ್ಟ್ರೀಯ ನ್ಯಾಯಾಂಗ ಸಮ್ಮೇಳನ 2020 - ‘ನ್ಯಾಯಾಂಗ ಮತ್ತು ಬದಲಾಗುತ್ತಿರುವ ಜಗತ್ತು’ ಕುರಿತು ಮಾತನಾಡಿದ ನ್ಯಾಯಮೂರ್ತಿ ಮಿಶ್ರಾ, “ಗೌರವಾನ್ವಿತ ಮಾನವ ಅಸ್ತಿತ್ವ ನಮ್ಮ ಪ್ರಮುಖ ಕಾಳಜಿ. ಸ್ಫೂರ್ತಿಯುತವಾದ ಮಾತುಗಳನ್ನಾಡಿದ, ಜಾಗತಿಕವಾಗಿ ಯೋಚಿಸುವ ಮತ್ತು ಸ್ಥಳೀಯವಾಗಿ ಕಾರ್ಯನಿರ್ವಹಿಸುವ ಬಹುಮುಖ ಪ್ರತಿಭೆ ನರೇಂದ್ರ ಮೋದಿಯವರಿಗೆ ನಾನು ಧ್ಯವಾದ ಸಮರ್ಪಿಸುತ್ತೇನೆ" ಎಂದು ಜಸ್ಟಿಸ್ ಮಿಶ್ರಾ ಹೇಳಿದ್ದರು.







