'ಪವರ್ ಬೆಗ್ಗರ್'ಗಳ ಬಗ್ಗೆ ನಾನು ಮಾತನಾಡುವುದಿಲ್ಲ: ಡಿ.ಕೆ. ಶಿವಕುಮಾರ್

ಬೆಂಗಳೂರು, ಜೂ.1: ''ಬಿಜೆಪಿಯವರು ಪವರ್ ಬೆಗ್ಗರ್ ಗಳು. ಅವರ ಬಗ್ಗೆ ಮಾತನಾಡುವುದಿಲ್ಲ. ಅವರೇನು ಏನು ಬೇಕಾದರೂ ಮಾಡಿಕೊಳ್ಳಲಿ. ಕೊರೋನ ಸಮಯದಲ್ಲಿ ಜನರ ಜೀವ ಉಳಿಸೋದು ನಮ್ಮ ಕರ್ತವ್ಯ. ಅವರ ಬಗ್ಗೆ ಮಾತನಾಡಿ ಸಮಯ ಹಾಳು ಮಾಡುವುದು ಬೇಡ'' ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಮಂಗಳವಾರ ತಮ್ಮನ್ನು ಭೇಟಿ ಮಾಡಿದ್ದ ಮಾಧ್ಯಮದವರ ಜೊತೆ ಅವರು ಮಾತನಾಡುತ್ತಿದ್ದರು.
'ಹಿಂದೆ ಯಡಿಯೂರಪ್ಪ ವಿರುದ್ಧ ದೂರು ನೀಡಲು ಸಚಿವ ಯೋಗೇಶ್ವರ್ ದಿಲ್ಲಿಗೆ ಹೋಗಿದ್ದರು. ಈಗ ಅವರ ವಿರುದ್ಧ ದೂರು ನೀಡಲು ವಿಜಯೇಂದ್ರ ದಿಲ್ಲಿಗೆ ಹೋಗಿದ್ದಾರೆ" ಎಂದು ಪ್ರಸ್ತಾಪಿಸಿದಾಗ ಶಿವಕುಮಾರ್ ಅವರು ಹೀಗೆ ಪ್ರತಿಕ್ರಿಯಿಸಿದರು.
'ನಾನು ಪವರ್ ಬೆಗ್ಗರ್ ಗಳ ಬಗ್ಗೆ ಮಾತನಾಡುವುದಿಲ್ಲ. ಎರಡು-ಮೂರು ಪಕ್ಷ ಸುತ್ತಿದವರನ್ನು ಯಡಿಯೂರಪ್ಪನವರು ತಮ್ಮ ಮನೆಗೆ ಕರೆದುಕೊಂಡು ಹೋದರು. ಈಗ ಅನುಭವಿಸಲಿ ಬಿಡಿ' ಎಂದು ಮಾರ್ಮಿಕವಾಗಿ ಹೇಳಿದ್ದಾರೆ.
ಹಿಂದೆ ಯಡಿಯೂರಪ್ಪನವರು ಪಕ್ಷ ಬಿಟ್ಟು, ಪಕ್ಷ ಕಟ್ಟಿ ಏನೆಲ್ಲ ಮಾಡಿದ್ದರು ಎಂಬುದು ಎಲ್ಲರಿಗೂ ಗೊತ್ತಿದೆ. ಎರಡು-ಮೂರು ಪಕ್ಷ ಬದಲಿಸಿದವರನ್ನು (ಯೋಗೇಶ್ವರ್) ತಮ್ಮ ಜತೆ ಕರೆದುಕೊಂಡು ಹೋದರು. ಈಗ ಅದಕ್ಕೆ ಅನುಭವಿಸುತ್ತಿದ್ದಾರೆ, ಅನುಭವಿಸಲಿ ಬಿಡಿ. ಹಿಂದೆ ನಾವು ಕೂಡ ಇದೇ ತಪ್ಪು ಮಾಡಿದ್ದೆವು. ಅದಕ್ಕೆ ಪ್ರತಿಫಲ ಅನುಭವಿಸಿದ್ದೇವೆ. ಈಗ ಯಡಿಯೂರಪ್ಪನವರ ಸರದಿ. ಹೀಗೆ ತಪ್ಪು ಮಾಡಿದವರೆಲ್ಲ ಅನುಭವಿಸಲೇಬೇಕು ಎಂದು ಹೇಳಿದರು.
'ಬಿಜೆಪಿಯವರು ಏನು ಬೇಕಾದರೂ ಮಾಡಿಕೊಳ್ಳಲಿ. ಕೊರೋನ ಸಮಯದಲ್ಲಿ ಜನರ ಜೀವ ಉಳಿಸೋದು ನಮ್ಮ ಕರ್ತವ್ಯ. ಇವರೆಲ್ಲಾ ಪವರ್ ಬೆಗ್ಗರ್ ಗಳು. ಇವರ ಬಗ್ಗೆ ಮಾತನಾಡಿ ಸಮಯ ಹಾಳು ಮಾಡುವುದು ಬೇಡ ಎಂದರು.
ಇವರು ದೆಹಲಿಗಾದರೂ ಹೋಗಲಿ, ಅಂಡಮಾನ್ ಗಾದರೂ ಹೋಗಲಿ. ಇದು ಎರಡು, ಮೂರು ಪಕ್ಷಗಳ ಸರ್ಕಾರ ಅಂತಾ ಮಾತನಾಡಲು ಅವರಿಗೆ ಶಕ್ತಿ ಕೊಟ್ಟವರು ಯಾರು? ಯಡಿಯೂರಪ್ಪನವರೇ ತಾನೇ..?! ರಾಜಕಾರಣದಲ್ಲಿ ನಾವು ಮಾಡಿದ್ದನ್ನು ನಾವೇ ಅನುಭವಿಸಬೇಕು ಎಂದರು.
ಈಗ ನಾವು ಬಡವರ ನೋವು, ಸಮಸ್ಯೆಗೆ ಸ್ಪಂದಿಸಿ, ಅವರ ಧ್ವನಿಯಾಗಿ ಕೆಲಸ ಮಾಡೋಣ. ಅವರ ಜೀವ ಉಳಿಸೋಣ. ಬೇರೆ ವಿಚಾರಗಳು ನಮ್ಮ ಆದ್ಯತೆಯಲ್ಲ' ಎಂದರು.
ಡಾ.ಸುಧಾಕರ್ ಲಸಿಕೆ ಕೊಡಿಸುವತ್ತ ಗಮನ ಹರಿಸಲಿ:
''ಸುಧಾಕರಣ್ಣಾ ಮೊದಲು ಲಸಿಕೆ ಕೊಡಿಸುವತ್ತ ಗಮನ ಹರಿಸಲಿ. ಪಂಚಾಯ್ತಿ, ರೆವೆನ್ಯು ಇಲಾಖೆ, ಪಾಲಿಕೆ ಅಧಿಕಾರಿಗಳಿಗೆ ಯಾರು ಸತ್ತಿದ್ದಾರೆ ಅಂತಾ ಗೊತ್ತಿದೆ. ಡೆತ್ ಆಡಿಟ್ ಮಾಡಲಿ. ನೀನು ಮೊದಲು ಬೆಡ್ ವ್ಯವಸ್ಥೆ ಕಲ್ಪಿಸಿ ಚಿಕಿತ್ಸೆ ನೀಡಿ, ಲಸಿಕೆ ಕೊಡುವತ್ತ ಗಮನ ಹರಿಸು. ಡೆತ್ ಆಡಿಟ್ ಕೆಲಸ ನಿನ್ನ ಕೈಯಲ್ಲಿ ಆಗೋಲ್ಲ. ಮೊದಲು ಈ ಕೆಲಸಗಳನ್ನು ಮಾಡು'' ಎಂದು ಡಿಕೆಶಿ ನುಡಿದರು.







