ಪತ್ರಕರ್ತನ ಮನೆಗೆ ದಾಳಿ ಮಾಡಿದ ಬಿಜೆಪಿ ಕಾರ್ಯಕರ್ತರು: ಆರೋಪ

facebook/samir dhar
ಹೊಸದಿಲ್ಲಿ,ಜೂ.1: ಪ.ಬಂಗಾಳದ ವೃತ್ತಪತ್ರಿಕೆ ‘ಆಜ್ ಕಾಲ್’ನ ತ್ರಿಪುರಾ ವರದಿಗಾರ ಸಮೀರ್ ಧರ್ ಅವರ ಮನೆಗೆ ದಾಳಿ ನಡೆಸಿದ ಬಿಜೆಪಿ ಬೆಂಬಲಿಗರು ಆವರಣ ಗೋಡೆಗಳನ್ನು ಧ್ವಂಸಗೊಳಿಸಿದ್ದಾರೆ. ದಾಳಿಯ ಹಿಂದಿನ ಉದ್ದೇಶ ಸ್ಪಷ್ಟವಾಗಿಲ್ಲ.
ತ್ರಿಪುರಾದಲ್ಲಿ ಎಡರಂಗದ ಸಂಚಾಲಕರಾಗಿರುವ ಬಿಜನ್ ಧರ್ ಅವರ ಸೋದರರಾಗಿರುವ ಸಮೀರ್ 2018ರಿಂದ ಇದು ತನ್ನ ಮನೆಯ ಮೇಲೆ ನಡೆದಿರುವ ಮೂರನೇ ದಾಳಿಯಾಗಿದೆ ಎಂದು ಸುದ್ದಿಸಂಸ್ಥೆಗೆ ತಿಳಿಸಿದರು.
ದುಷ್ಕರ್ಮಿಗಳಿಗೆ ಮನೆಯೊಳಗೆ ನುಗ್ಗಲು ಸಾಧ್ಯವಾಗಲಿಲ್ಲ,ಆದರೆ ಆವರಣ ಗೋಡೆಗಳನ್ನು ಧ್ವಂಸಗೊಳಿಸಿದ್ದಾರೆ. ತನಗೆ ಜೀವ ಬೆದರಿಕೆಯೊಡ್ಡಿದ್ದಾರೆ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದರು. ತನ್ನ ನೆರೆಹೊರೆಯ ಮನೆಗಳ ಮೇಲೂ ಬಿಜೆಪಿ ಬೆಂಬಲಿಗರು ದಾಳಿ ನಡೆಸಿದ್ದಾರೆ ಎಂದು ಅವರು ಆರೋಪಿಸಿದರು.
ಧರ್ ಮನೆಯ ಮೇಲಿನ ದಾಳಿ ಪೂರ್ವಯೋಜಿತವಾಗಿತ್ತು ಮತ್ತು ಸಂಚಿನ ಭಾಗವಾಗಿತ್ತು ಎಂದು ಹೇಳಿರುವ ದಿ ಅಸೆಂಬ್ಲಿ ಆಫ್ ಜರ್ನಲಿಸ್ಟ್ಸ್, ಕಳೆದ ವರ್ಷ ಕಾರ್ಯಕ್ರಮವೊಂದರಲ್ಲಿ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇಬ್ ಅವರು ರಾಜ್ಯದಲ್ಲಿಯ ಕೋವಿಡ್ ಸ್ಥಿತಿಯ ಬಗ್ಗೆ ‘ಸುಳ್ಳು ಸುದ್ದಿಗಳನ್ನು ’ ಹರಡುತ್ತಿರುವುದಕ್ಕಾಗಿ ಮಾಧ್ಯಮಗಳ ವಿರುದ್ಧ ಕ್ರಮ ಕೈಗೊಳ್ಳುವ ಬೆದರಿಕೆ ಒಡ್ಡಿದಾಗಿನಿಂದ ಇಂತಹ ಘಟನೆಗಳು ಹೆಚ್ಚುತ್ತಿವೆ. ಆಗಿನಿಂದ ತ್ರಿಪುರಾದಾದ್ಯಂತ 28 ಪತ್ರಕರ್ತರ ಮೇಲೆ ದಾಳಿಗಳು ನಡೆದಿವೆ ಎಂದು ತಿಳಿಸಿದೆ.
ಧರ್ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ.
ತಾನು ರಾಜ್ಯದಲ್ಲಿ ಹಿಂಸಾಚಾರವನ್ನು ಬೆಂಬಲಿಸುತ್ತಿದ್ದೇನೆ ಎನ್ನುವುದನ್ನು ಬಿಜೆಪಿ ನಿರಾಕರಿಸಿದೆ. ‘ರಾಜಕೀಯ ಹಿಂಸಾಚಾರದಲ್ಲಿ ತೊಡಗಿದ್ದಕ್ಕಾಗಿ ಬಿಜೆಪಿ ಸದಸ್ಯರನ್ನೂ ಬಂಧಿಸಿದ ನಿದರ್ಶನಗಳಿವೆ. ರಾಜ್ಯದಲ್ಲಿ ರಾಜಕೀಯ ಹಿಂಸಾಚಾರವನ್ನು ನಾವು ಸಹಿಸುವುದಿಲ್ಲ. ಪೊಲೀಸರಿಗೆ ತಮ್ಮ ಕಾರ್ಯ ನಿರ್ವಹಿಸಲು ಪೂರ್ಣ ಸ್ವಾತಂತ್ರವಿದೆ ಮತ್ತು ದುಷ್ಕರ್ಮಿಗಳನ್ನು ಅವರು ಬಂಧಿಸುತ್ತಾರೆ ’ ಎಂದು ತ್ರಿಪುರಾ ಬಿಜೆಪಿಯ ವಕ್ತಾರ ನಬೇಂದು ಭಟ್ಟಾಚಾರ್ಯ ತಿಳಿಸಿದರು.