34 ನೆಕ್ಕಿಲಾಡಿ: ಪುಟಾಣಿಗಳಿಗೆ ಮೈದಾನಕ್ಕೆ ಬಾರದಂತೆ ಬೆದರಿಕೆ: ಪೊಲೀಸ್ ದೂರು
ಉಪ್ಪಿನಂಗಡಿ, ಜೂ.1: ಸಾರ್ವಜನಿಕ ಮೈದಾನದಲ್ಲಿ ಗುಂಪೊಂದು ಆಟವಾಡುತ್ತಿದ್ದಾಗ ಆ ಮೈದಾನಕ್ಕೆ ಸೈಕಲ್ ಸವಾರಿ ಮಾಡಿಕೊಂಡು ತೆರಳಿದ ಇಬ್ಬರು ಪುಟಾಣಿಗಳನ್ನು ಆ ಗುಂಪು ಮೈದಾನಕ್ಕೆ ಬಾರದಂತೆ ಬೆದರಿಸಿ, ಓಡಿಸಿದ ಘಟನೆ 34 ನೆಕ್ಕಿಲಾಡಿಯ ಮೈಂದಡ್ಕ ಮೈದಾನದಲ್ಲಿ ಮೇ 31ರಂದು ಸಂಜೆ ನಡೆದಿರುವ ಬಗ್ಗೆ ಮಕ್ಕಳ ತಂದೆ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.
ಇಲ್ಲಿನ ನಿವಾಸಿ ಫ್ರಾನ್ಸಿಸ್ ಅನಿಲ್ ಮಿನೇಜಸ್ ಈ ಬಗ್ಗೆ ಪೊಲೀಸ್ ದೂರು ನೀಡಿದ್ದಾರೆ. ತನ್ನ ಮನೆ ಸಮೀಪ ಕುಮ್ಕಿ ಜಾಗವಿದ್ದು, ಅದರ ಬದಿಯಲ್ಲಿಯೇ ಮೈಂದಡ್ಕ ಎಂಬಲ್ಲಿ ಸಾರ್ವಜನಿಕ ಆಟದ ಮೈದಾನವಿದೆ. ನಿನ್ನೆ ಸಂಜೆ ತನ್ನ ಏಳರ ಹರೆಯದ ಮಗ ಹಾಗೂ 12ರ ಹರೆಯದ ಮಗಳು ಸೈಕಲ್ ಸವಾರಿ ಮಾಡುತ್ತಾ ಈ ಸಾರ್ವಜನಿಕ ಮೈದಾನಕ್ಕೆ ತೆರಳಿದ್ದಾರೆ. ಈ ವೇಳೆ ಅಲ್ಲಿ ಮಂಜು, ಹರೀಶ್ಚಂದ್ರ, ಸುದರ್ಶನ್, ಬಾಬು ಮೂಲ್ಯ, ಮಂಜು, ಲೋಕೇಶ್ ದರ್ಬೆ ಸೇರಿದಂತೆ ಸುಮಾರು 30ರಷ್ಟು ಮಂದಿಯಿದ್ದ ಗುಂಪು ಆಟವಾಡುತ್ತಿತ್ತು. ಆ ಗುಂಪಿನಲ್ಲಿದ್ದವರು ಸಾರ್ವಜನಿಕ ಮೈದಾನಕ್ಕೆ ತೆರಳುವ ದಾರಿಯನ್ನು ಬಂದ್ ಮಾಡಿ, ಅದಕ್ಕೆ ಅಡ್ಡವಾಗಿ ಗಿಡಗಳನ್ನು ನೆಟ್ಟಿದ್ದರು. ಈ ಗಿಡಗಳ ಮಧ್ಯೆ ಮಕ್ಕಳು ಸೈಕಲ್ ಸವಾರಿ ಮಾಡಿದ್ದರೆಂದು ಕೋಪಗೊಂಡು ಮಕ್ಕಳನ್ನು ಇನ್ನು ಮೈದಾನಕ್ಕೆ ಬಂದರೆ ಜಾಗೃತೆ ಎಂದು ಬೆದರಿಸಿ ಅಲ್ಲಿಂದ ಓಡಿದ್ದಾರೆ. ಅಲ್ಲದೇ, ಮಕ್ಕಳಿಗೆ ಅವ್ಯಾಚ ಶಬ್ದಗಳಿಂದ ನಿಂದಿಸಿ, ಅವರು ಭಯಭೀತರಾಗುವಂತೆ ಮಾಡಿದ್ದಾರೆ ಎಂದು ದೂರಿದ್ದಾರೆ.





