ದ.ಕ. ಯುವ ಕಾಂಗ್ರೆಸ್‌ನಿಂದ 'ನಮಗೂ ಕೋವಿಡ್ ಲಸಿಕೆ ಬೇಕು' ಆಂದೋಲನ: ಲುಕ್ಮಾನ್ ಬಂಟ್ವಾಳ

ಮಂಗಳೂರು, ಜೂ.1: 'ಕೋವಿಡ್ ನಿಯಂತ್ರಣ ಲಸಿಕೆ ನಮಗೂ ಬೇಕು' ಎಂಬ ಆಂದೋಲನವನ್ನು ದ.ಕ. ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಆರಂಭಿಸುವುದಾಗಿ ಜಿಲ್ಲಾಧ್ಯಕ್ಷ ಲುಕ್ಮಾನ್ ಬಂಟ್ವಾಳ ತಿಳಿಸಿದ್ದಾರೆ.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯುವಜನರಿಗೆ, ಗ್ರಾಮೀಣ ಪ್ರದೇಶದ ಜನತೆಗೆ, ಬಡವರಿಗೆ ಕೋವಿಡ್ ಲಸಿಕೆ ದೊರೆಯುತ್ತಿಲ್ಲ. ಬಿಜೆಪಿ ಸರಕಾರ ಕೇವಲ ಶ್ರೀಮಂತರಿಗೆ ಮಾತ್ರ ಲಸಿಕೆ ಪೂರೈಸುವ ನೀತಿಯನ್ನು ಅನುಸರಿಸುತ್ತಿದೆ. 18ರಿಂದ 44ರ ವಯೋಮಾನದವರಿಗೆ ಲಸಿಕೆ ನೀಡುವುದನ್ನು ಸರಕಾರ ಸ್ಥಗಿತ ಮಾಡಿದೆ. ಆದರೆ ಖಾಸಗಿ ಆಸ್ಪತ್ರೆಯಲ್ಲಿ ದುಬಾರಿ ದರದಲ್ಲಿ ಲಸಿಕೆ ನೀಡಲಾಗುತ್ತಿದೆ. ಜನ ವಿರೋಧಿ ಲಸಿಕೆ ನೀತಿ ಹೊಂದಿರುವ ಕೇಂದ್ರ ಸರಕಾರದ ವಿರುದ್ಧ ನಮಗೂ ಲಸಿಕೆ ಬೇಕು ಎಂಬ ಆಂದೋಲನವನ್ನು ಯುವಜನತೆ ನಡೆಸಲಿದ್ದಾರೆ ಎಂದರು.
ಕೊರೋನ ಸೋಂಕು ನಿಯಂತ್ರಣ ಮಾಡಲು ಪ್ರಮುಖ ಆಯುಧವಾದ ಲಸಿಕೆ ನೀತಿ ಸಂಪೂರ್ಣ ವೈಫಲ್ಯವಾಗಿದ್ದು, ಲಸಿಕೆಯ ದರ ನೀತಿ ಜನವಿರೋಧಿ ಆಗಿದೆ ಎಂದು ಅವರು ಹೇಳಿದರು.
ಕೇಂದ್ರ ಸರ್ಕಾರ ಲಸಿಕೆ ಉತ್ಪಾದಿಸುವ ಕಂಪನಿಗಳಿಗೆ ಬೇರೆಬೇರೆ ದರ ನಿಗದಿ ಪಡಿಸಲು ಅವಕಾಶ ನೀಡಿರುವುದು ಸರಿಯಲ್ಲ. ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಖರೀದಿಸಲು ಮೂರು ವಿಧದ ದರಗಳನ್ನು ವಿಧಿಸಿದೆ. ಕೇಂದ್ರ ಸರಕಾರಕ್ಕೆ 150, ರಾಜ್ಯ ಸರಕಾರ 400 ರೂ. (ಕೊವಿಶೀಲ್ಡ್) ದರಗಳನ್ನು ನಿಗದಿ ಮಾಡಿರುವುದರಿಂದ ವ್ಯಾಪಕ ಭ್ರಷ್ಟಾಚಾರಕ್ಕೆ ಕಾರಣವಾಗಲಿದೆ. ಮಾತ್ರವಲ್ಲದೆ, ಬಡವರು, ಕಾರ್ಮಿಕರು ಮತ್ತು ಮಧ್ಯಮ ವರ್ಗದವರಿಗೆ ಲಸಿಕೆ ದೊರೆಯದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.
ದೇಶದಲ್ಲಿ ಕೊರೋನ ಎರಡನೇ ಅಲೆಯೂ ಹೆಚ್ಚಿನ ಸಂಕಷ್ಟವನ್ನು ಉಂಟು ಮಾಡಲು ನರೇಂದ್ರ ಮೋದಿ ಸರಕಾರದ ಲಸಿಕೆ ನೀತಿಯೇ ಕಾರಣವಾಗಿದೆ. ಸಕಾಲದಲ್ಲಿ ಲಸಿಕೆ ಉತ್ಪಾದನೆಗೆ ಅನುದಾನ ಮತ್ತು ಉತ್ತೇಜನ ನೀಡಲು ವಿಫಲವಾಗಿರುವುದರಿಂದ ಸಾವಿರಾರು ಮಂದಿ ಜೀವ ಕಳೆದುಕೊಂಡಿದ್ದು, ಇದರ ಜವಾಬ್ದಾರಿಯನ್ನು ಯಾರು ಹೊರುತ್ತಾರೆ ಎಂದು ಲುಕ್ಮಾನ್ ಪ್ರಶ್ನಿಸಿದರು.
ಕೊರೋನ 2ನೇ ಅಲೆಯಲ್ಲಿ ಸಾವಿರಾರು ಮಂದಿ ಜೀವ ಕಳೆದುಕೊಳ್ಳಲು ಸಕಾಲದಲ್ಲಿ ಆಕ್ಸಿಜನ್ ಮತ್ತು ವೈದ್ಯಕೀಯ ಸೌಲಭ್ಯ ದೊರಯದಿರುವುದೇ ಕಾರಣವಾಗಿದ್ದು, ಇದೊಂದು ಸರಕಾರದ ಬಹುದೊಡ್ಡ ವೈಫಲ್ಯ ಎಂದು ಆರೋಪಿಸಿದರು.
ಕೋವಿಡ್ ಎರಡನೆ ಅಲೆಯ ಸಂದರ್ಭ ರಾಜಕೀಯ ಪಕ್ಷವಾಗಿ ಯುವ ಕಾಂಗ್ರೆಸ್ ನಿರಾಶ್ರಿತರು, ನೊಂದವರಿಗೆ ಸಹಾಯಹಸ್ತ ಚಾಚಿದೆ. ಯುವ ಕಾಂಗ್ರೆಸ್ ಸಹಾಯವಾಣಿಗೆ 1,912 ಕರೆಗಳು ಬಂದಿದ್ದು ಅವುಗಳಲ್ಲಿ ಶೇ.90 ಕರೆಗಳಿಗೆ ಸ್ಪಂದಿಸಲಾಗಿದೆ. 202 ಮಂದಿಯನ್ನು ಆಸ್ಪತ್ರೆಗೆ ದಾಖಲು ಮಾಡಿದರೆ, 99 ಡಿಸ್ಚಾರ್ಜ್‌ಗೆ ಸಹಕಾರ, 42 ರೋಗಿಗಳಿಗೆ ಆಕ್ಸಿಜನ್, 153 ಮಂದಿಗೆ ಔಷಧ, ಇಬ್ಪರಿಗೆ ಪ್ಲಾಸ್ಮಾ,130 ಮಂದಿಗೆ ಲಸಿಕೆ, 204 ರೋಗಿಗಳಿಗೆ ಆ್ಯಂಬುಲೆನ್ಸ್ ನೆರವು, 94 ಯೂನಿಟ್ ರಕ್ತದ ವ್ಯವಸ್ಥೆ ಮಾಡಲಾಗಿದೆ. ಜಿಲ್ಲಾದ್ಯಂತ ಬೀದಿಬದಿ ಇರುವ ನಿರಾಶ್ರಿತರ ಸಹಿತ 13730 ಮಂದಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿದೆ. 148ರೋಗಿಗಳಿಗೆ ರಕ್ತದ ವ್ಯವಸ್ಥೆ ಮಾಡಲಾಗಿದ್ದು, ಇವೆಲ್ಲದರ ದಾಖಲೆಗಳು ತಮ್ಮಲ್ಲಿವೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸರ್ಫರಾಜ್ ನವಾಝ್, ಆಶಿತ್ ಪಿರೇರ, ಸುಳ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಶಾಹುಲ್ ಹಮೀದ್, ಜಿಲ್ಲಾ ಇಂಟಕ್ ಪ್ರಧಾನ ಕಾರ್ಯದರ್ಶಿ ಚಿತ್ತರಂಜನ್ ಶೆಟ್ಟಿ, ಎನ್‌ಎಸ್‌ಯುಐ ರಾಷ್ಟ್ರೀಯ ಸಂಯೋಜಕ ಅನ್ವೀತ್ ಕಟೀಲ್, ನವಾಲ್ ಉಪ್ಪಿನಂಗಡಿ, ಎಂ. ತೌಫೀಕ್, ದೀಕ್ಷಿತ್ ಅತ್ತಾವರ, ರೋಷನ್ ರೈ, ಪ್ರಸಾದ್ ಗಾಣಿಗ, ಹಸನ್ ಡೀಲ್ಸ್, ಮೀನಾ ತೆಲ್ಲಿಸ್, ಇಸ್ಮಾಯೀಲ್ ಸಿದ್ದೀಕ್, ಅರ್ಷದ್ ಮುಲ್ಕಿ, ಫಯಾಝ್ ಅಮೆಮಾರ್, ಅಲ್ಫಾಝ್, ಶಾಫಿ ಕೈಕಂಬ, ಇಮ್ರಾನ್ ಶಾಂತಿಅಂಗಡಿ ಉಪಸ್ಥಿತರಿದ್ದರು.








