ಕೋವಿಡ್ ನಿಯಂತ್ರಣಕ್ಕೆ ಆಗ್ರಹಿಸಿ ಉಡುಪಿ ಜಿಲ್ಲೆಯಾದ್ಯಂತ ಸಿಪಿಐಎಂ ಪ್ರತಿಭಟನೆ

ಉಡುಪಿ, ಜೂ.1: ಎರಡನೇ ಅಲೆ ಸಮರ್ಪಕವಾಗಿ ನಿರ್ವಹಿಸಲು, ಕೋವಿಡ್ ತಡೆಗಟ್ಟಲು, 3ನೇ ಅಲೆಯ ತಡೆಗಾಗಿ ಎಲ್ಲರಿಗೂ ಲಸಿಕೆ ಕೂಡಲೇ ಒದಗಿಸಲು, ಲಾಕ್‌ಡೌನ್‌ನಿಂದ ಸಂತ್ರಸ್ಥರಾದ ಜನರಿಗೆ ಪರಿಹಾರ ನೀಡುವಂತೆ ಆಗ್ರಹಿಸಿ ಉಡುಪಿ ಜಿಲ್ಲೆಯಾದ್ಯಂತ ಇಂದು ಸಿಪಿಎಂ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಎಲ್ಲಾ ನಾಗರಿಕರಿಗೂ ಉಚಿತ ಲಸಿಕೆ ನೀಡಬೇಕು. ಲಸಿಕೆಯನ್ನು ದುಪ್ಪಟ್ಟು ಬೆಲೆಗೆ ಕಾಳಸಂತೆಯಲ್ಲಿ ಮಾರುತ್ತಿರುವವರನ್ನು ಬಂಧಿಸಿ ಕಠಿಣ ಕ್ರಮ ಜರುಗಿಸ ಬೇಕು. ಆದಾಯ ತೆರಿಗೆಯಿಂದ ಹೊರಗಿರುವ ಎಲ್ಲಾ ಕುಟುಂಬಗಳಿಗೂ 3 ತಿಂಗಳು 10 ಸಾವಿರ ನಗದು ಕೊಡಬೇಕು. ಎಲ್ಲಾ ಕುಟುಂಬಗಳಿಗೂ ಉಚಿತ ಪೌಷ್ಟಿಕಾಂಶ ಪಡಿತರ ಆಹಾರ ಒದಗಿಸಬೇಕು.
ರೈತರ-ಕಾರ್ಮಿಕರ ವಿರೋಧಿ ಕಾನೂನು ರದ್ದು ಮಾಡಬೇಕು, ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಕೂಲಿ 600ರೂ.ಗೆ ಹೆಚ್ಚಿಸಿ ನಗರಗಳಿಗೂ ವಿಸ್ತರಣೆ ಮಾಡಬೇಕು ಕೂಲಿಕಾರರಿಗೆ, ಕಾರ್ಮಿಕರಿಗೆ ದಿನಗೂಲಿ ಮಾಡಲು ಅವಕಾಶ ನೀಡಲು ಖಾಸಗಿ ಆಸ್ಪತ್ರೆಗಳ ದುಬಾರಿ ಬೆಲೆಗಳನ್ನು ನಿಯಂತ್ರಿಸಲು, ಕೋವಿಡ್ ಪ್ರಂಟ್ ಲೈನ್ ಕಾರ್ಯಕರ್ತರಿಗೆ ಸೂಕ್ತ ರಕ್ಷಣೆ ಒದಗಿಸಿ ಪರಿಹಾರ ನೀಡುವಂತೆ ಪ್ರತಿಭಟನಕಾರರು ಒತ್ತಾಯಿಸಿದರು.
ಕುಂದಾಪುರದ ಹೆಂಚು ಕಾರ್ಮಿಕ ಭವನದ ಎದುರು ನಡೆದ ಪ್ರತಿಭಟನೆ ಯಲ್ಲಿ ವಲಯ ಕಾರ್ಯದರ್ಶಿ ಎಚ್.ನರಸಿಂಹ, ಕೆ.ಶಂಕರ್ ಮಾತನಾಡಿದರು. ಪ್ರತಿಭಟನೆಯಲ್ಲಿ ಸುರೇಶ್ ಕಲ್ಲಾಗರ, ಮಹಾಬಲ ವಡೇರಹೋಬಳಿ, ವಿ. ನರಸಿಂಹ, ಬಲ್ಕೀಸ್, ರವಿ ವಿ.ಎಂ. ಮೊದಲಾದವರು ಉಪಸ್ಥಿತರಿದ್ದರು.
ಬೈಂದೂರು ಸಿಪಿಎಂ ಕಛೇರಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ವೆಂಕಟೇಶ ಕೋಣಿ, ಮುಖಂಡರಾದ ಗಣೇಶ ತೊಂಡೆಮಕ್ಕಿ, ರೊನಾಲ್ಡ್, ಕಟ್ಟಡ ಕಾರ್ಮಿಕ ಸಂಘದ ಮುಖಂಡರು ಪಾಲ್ಗೊಂಡಿದ್ದರು.
ಬ್ರಹ್ಮಾವರದ ಕಚೇರಿ ಮತ್ತು ಮನೆಗಳಲ್ಲಿ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ಉಡುಪಿ ತಾಲುಕು ಕಾರ್ಯದರ್ಶಿ ಶಶಿಧರ ಗೊಲ್ಲ, ಮುಖಂಡರಾದ ಸುಭಾಸ್ ನಾಯಕ್, ರಮೇಶ ಪೂಜಾರಿ ಭಾಗವಹಿಸಿದ್ದರು. ಉಡುಪಿಯ ಪಡುಕೆರೆ, ಪೆರಂಪಳ್ಳಿ ಮೊದಲಾದ ಕಡೆಗಳಲ್ಲಿಯೂ ಪ್ರತಿಭಟನೆ ನಡೆಸ ಲಾಯಿತು.







