ಪೊಲೀಸ್ ಅಧಿಕಾರಿ, ಸಿಬ್ಬಂದಿಯ ‘ಗಾನ- ಸುಧೆ’ ; ಕೋವಿಡ್ ವಾರಿಯರ್ಸ್‌ಗಳಿಗೆ ಸಮರ್ಪಣೆ

ಮಂಗಳೂರು, ಜೂ. 1: ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ನೇತೃತ್ವ ಹಾಗೂ ಫೇಸ್‌ಬುಕ್ ಲೈವ್ ಗಾಯಕ ಅರವಿಂದ್ ವಿವೇಕ್ ಸಾರಥ್ಯದಲ್ಲಿ ಇಂದು ನಗರದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯಿಂದ ಗಾನ- ಸುಧೆ ಎಂಬ ಗಾಯನ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಅರವಿಂದ್ ವಿವೇಕ್ ಫೇಸ್‌ಬುಕ್ ಪೇಜ್ ಮೂಲಕ ನೇರ ಪ್ರಸಾರವಾದ ಈ ಕಾರ್ಯಕ್ರಮವು ನಗರದ ಸಂತ ಅಲೋಶಿಯಸ್ ಕಾಲೇಜಿನ ಅಡಿಟೋರಿಯಂನಲ್ಲಿ ಆಯೋಜಿಸಲಾಗಿದ್ದು, ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅವರು ಖುದ್ದು ಹಾಡು ಹಾಡಿದರು. ಕಾರ್ಯಕ್ರಮದಲ್ಲಿ ನಗರ ಪೊಲೀಸ್ ಇಲಾಖೆಯ 15ಕ್ಕೂ ಅಧಿಕ ಮಂದಿ ಅಧಿಕಾರಿಗಳು ಹಾಗೂ ಸಿಬ್ಬಂದಿ 35ಕ್ಕೂ ಅಧಿಕ ಕನ್ನಡ, ಹಿಂದಿ ಚಲನಚಿತ್ರಗೀತೆಗಳಲ್ಲದೆ, ಜನಪದ ಹಾಡುಗಳ ಮೂಲಕ ತಮ್ಮ ಕಲಾ ಪ್ರತಿಭೆಯನ್ನು ಪ್ರದರ್ಶಿಸಿದರು.
ಸುಮಾರು 3.30 ಗಂಟೆಗೂ ಅಧಿಕ ಅವಧಿಯ ಫೇಸ್‌ಬುಕ್ ಲೈವ್ ಕಾರ್ಯಕ್ರಮ ಇದಾಗಿದ್ದು, 2800ಕ್ಕೂ ಅಧಿಕ ಮಂದಿ ನೇರ ಪ್ರಸಾರದ ಸಂದರ್ಭ ಕಾರ್ಯಕ್ರಮವನ್ನು ಶೇರ್ ಮಾಡಿದ್ದಲ್ಲದೆ, 7700ಕ್ಕೂ ಅಧಿಕ ಲೈಕ್‌ಗಳು, ಗಾಯಕರಿಗೆ ಅಭಿನಂದನೆ ಸಲ್ಲಿಸಿ 15000ಕ್ಕೂ ಅಧಿಕ ಕವೆುಂಟ್‌ಗಳು ವ್ಯಕ್ತವಾಗಿವೆ.
ರಾಜ್ಯದ ಎಲ್ಲಾ ಕೋವಿಡ್ ವಾರಿಯರ್ಸ್‌ಗಳಿಗೆ ಸಮರ್ಪಣೆಯಾಗಿ ಕೋವಿಡ್ ನಿಯಮಾವಳಿಗಳನ್ನು ಪಾಲಿಸಿಕೊಂಡು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಇಲಾಖೆಯಲ್ಲಿರುವ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ಪ್ರಯತ್ನ ಇದು ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.








