ಕೋವಿಡ್ ಸೋಂಕಿನ ಭೀತಿ: ಪೆರೋಲ್ ಸಿಕ್ಕರೂ ಜೈಲಿನಿಂದ ಹೊರಬರಲು ಒಪ್ಪದ ಕೈದಿಗಳು

ಮುಂಬೈ,ಜೂ.1: ಕೋವಿಡ್ ಭೀತಿ ಜೈಲಿನಲ್ಲಿರುವ ಪಾತಕಿಗಳನ್ನೂ ಬಿಟ್ಟಿಲ್ಲ. ಮಹಾರಾಷ್ಟ್ರದ ವಿವಿಧ ಜೈಲುಗಳಲ್ಲಿರುವ ಕನಿಷ್ಠ 26 ಕೈದಿಗಳು ಪೆರೋಲ್ ಗೆ ಅರ್ಹರಾಗಿದ್ದರೂ ಅದಕ್ಕೆ ಅರ್ಜಿ ಸಲ್ಲಿಸಲು ಸಿದ್ಧರಿಲ್ಲ ಎಂದು theindianexpressವರದಿ ಮಾಡಿದೆ.
ಕೋವಿಡ್ ಲಾಕ್ಡೌನ್ ನಲ್ಲಿ ಹೊರಗಿನ ಜಗತ್ತಿನಲ್ಲಿ ತಾವು ಬದುಕುವುದು ಹೇಗೆ ಎಂದು ಕೆಲವರು ಚಿಂತಿತರಾಗಿದ್ದರೆ ಇತರರಿಗೆ ಈ ಸಂಕಷ್ಟದ ಸಮಯದಲ್ಲಿ ತಾವು ತಮ್ಮ ಕುಟುಂಬಕ್ಕೆ ಹೊರೆಯಾಗುವ ಭೀತಿ ಕಾಡುತ್ತಿದೆ. ಅದ್ಕಕಿಂತ ಜೈಲಿನಲ್ಲಿಯೇ ಇದ್ದುಕೊಂಡು ಕೆಲಸ ಮಾಡುತ್ತ ದಿನಗೂಲಿ ಗಳಿಸುವುದೇ ಒಳ್ಳೆಯದು ಎಂದು ಅವರು ಭಾವಿಸಿದ್ದಾರೆ. ಇತರ ಕೆಲವರು ಆದಷ್ಟು ಬೇಗ ಜೈಲುವಾಸವನ್ನು ಪೂರ್ಣಗೊಳಿಸಲು ಬಯಸಿದ್ದಾರೆ ಎಂದು ವರದಿ ತಿಳಿಸಿದೆ.
ಕೈದಿಗಳಿಗೆ ಮನಸ್ಸಿಲ್ಲದಿದ್ದರೆ ತಾತ್ಕಾಲಿಕ ಜಾಮೀನು ಅಥವಾ ಪೆರೋಲ್ ನಲ್ಲಿ ಬಿಡುಗಡೆಗೊಳ್ಳುವಂತೆ ಅವರನ್ನು ಬಲವಂತಗೊಳಿಸುವಂತಿಲ್ಲ ಎಂದು ಬಾಂಬೆ ಉಚ್ಚ ನ್ಯಾಯಾಲಯವು ಕಳೆದ ತಿಂಗಳು ಆದೇಶಿಸಿತ್ತು.
ವರ್ಹಾಡ್ ನಂತಹ ಕೆಲವು ಎನ್ಜಿಒಗಳು ಕೈದಿಗಳ ಜೀವನ ಬದಲಾವನೆಗಾಗಿ ಶ್ರಮಿಸುತ್ತಿವೆ. ವರ್ಹಾಡ್ ಲಾಕ್ಡೌನ್ ಸಂದರ್ಭ ಸಂಕಷ್ಟಲ್ಲಿರುವ ಬಿಡುಗಡೆಗೊಂಡ ಕೈದಿಗಳು ಸೇರಿದಂತೆ 500ಕ್ಕೂ ಅಧಿಕ ಕೈದಿಗಳ ಕುಟುಂಬಗಳಿಗೆ ಪಡಿತರಗಳನ್ನು ವಿತರಿಸುತ್ತಿದೆ. ಸಾಂಕ್ರಾಮಿಕವು ಆರಂಭಗೊಂಡಾಗಿನಿಂದ ಸಂಸ್ಥೆಗೆ ಆರ್ಥಿಕ ಮುಗ್ಗಟ್ಟು ಎದುರಾಗಿದ್ದು,ಹೆಚ್ಚಿನ ಕೈದಿಗಳಿಗೆ ನೆರವಾಗಲು ಸಾಧ್ಯವಾಗುತ್ತಿಲ್ಲ ಎಂದು ವರ್ಹಾಡ್ ನ ಸ್ಥಾಪಕಾಧ್ಯಕ್ಷ ರವೀಂದ್ರ ವೈದ್ಯ ತಿಳಿಸಿದರು.
ಕಳೆದ ವರ್ಷ ಸಾಂಕ್ರಾಮಿಕವು ಭುಗಿಲೆದ್ದಾಗಿನಿಂದ ಜೈಲುಗಳಲ್ಲಿ ದಟ್ಟಣೆಯನ್ನು ಕಡಿಮೆ ಮಾಡಲು ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಮಹಾರಾಷ್ಟ್ರದ 46 ಜೈಲುಗಳಿಂದ 10,000ಕ್ಕೂ ಅಧಿಕ ಕೈದಿಗಳನ್ನು ತಾತ್ಕಾಲಿಕ ಜಾಮೀನು ಅಥವಾ ತುರ್ತು ಪೆರೋಲ್ ನಲ್ಲಿ ಬಿಡುಗಡೆಗೊಳಿಸಲಾಗಿದೆ ಎಂದು ವರದಿ ಉಲ್ಲೇಖಿಸಿದೆ.
ಜೈಲುಗಳಲ್ಲಿರುವ ಕೆಲವು ಕೈದಿಗಳ ಶಿಕ್ಷೆ ಮುಗಿಯಲು ಕೆಲವೇ ತಿಂಗಳುಗಳು ಬಾಕಿಯಿವೆ. ಹಲವರಿಗೆ ಹೊರಗೆ ತಮ್ಮದೇ ಆದ ಕುಟುಂಬಗಳಿಲ್ಲ ಅಥವಾ ಯಾವುದೇ ಸಾಮಾಜಿಕ ಬೆಂಬಲವಿಲ್ಲ. ಇಂತಹ ಸ್ಥಿತಿಯಲ್ಲಿ ಬಿಡುಗಡೆಗೊಳ್ಳುವುದಕ್ಕಿಂದ ಜೈಲಿನಲ್ಲಿ ಇರುವುದೇ ವಾಸಿ ಎಂದು ಕೈದಿಗಳು ಭಾವಿಸಿದ್ದಾರೆ. ಜೈಲಿನಲ್ಲಿ ಕನಿಷ್ಠ ಚಿಕಿತ್ಸೆಯಾದರೂ ಸಿಗುತ್ತದೆ ಅಥವಾ ಸರಕಾರಿ ಆಸ್ಪತ್ರೆಗಾದರೂ ದಾಖಲಾಗಬಹುದು ಎನ್ನುವುದು ಅವರ ಅಭಿಪ್ರಾಯವಾಗಿದೆ ಎಂದು ಜೈಲು ಅಧಿಕಾರಿಯೋರ್ವರು ತಿಳಿಸಿದರು.
ಕೋವಿಡ್ ಸಾಂಕ್ರಾಮಿಕ ಆರಂಭಗೊಂಡಾಗಿನಿಂದ ಮಹಾರಾಷ್ಟ್ರದ ಬಂದಿಖಾನೆಗಳ ಇಲಾಖೆಯಲ್ಲಿ 4,961 ಸೋಂಕು ಪ್ರಕರಣಗಳು ದಾಖಲಾಗಿವೆ. ಈ ಪೈಕಿ 4,049 ಕೈದಿಗಳಿದ್ದರೆ,912 ಜನರು ಜೈಲು ಸಿಬ್ಬಂದಿಗಳು. 13 ಕೈದಿಗಳು ಮತ್ತು ಒಂಭತ್ತು ಸಿಬ್ಬಂದಿಗಳು ಕೊರೋನವೈರಸ್ ಗೆ ಬಲಿಯಾಗಿದ್ದಾರೆ ಎಂದು ವರದಿ ಬೆಟ್ಟು ಮಾಡಿದೆ.