ಕೊರೋನದಿಂದ ಅನಾಥರಾದ ಮಕ್ಕಳಿಗೆ ರೂಪಿಸಿದ ಯೋಜನೆಗಳ ಬಗ್ಗೆ ಕೇಂದ್ರದಿಂದ ವಿವರ ಕೋರಿದ ಸುಪ್ರೀಂ

ಹೊಸದಿಲ್ಲಿ, ಜೂ. 1: ಕೊರೋನ ಸಾಂಕ್ರಾಮಿಕ ರೋಗದಿಂದ ಹೆತ್ತವರನ್ನು ಕಳೆದುಕೊಂಡ ಮಕ್ಕಳಿಗೆ ಪರಿಹಾರ ನೀಡಲು ಕೇಂದ್ರ ಸರಕಾರ ರೂಪಿಸಿದ ಕಲ್ಯಾಣ ಯೋಜನೆಗಳ ವಿವರಗಳನ್ನು ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಮಂಗಳವಾರ ಸೂಚಿಸಿದೆ.
ಯೋಜನೆಗಳ ಮೇಲ್ವಿಚಾರಣೆಗೆ ರೂಪಿಸಲಾದ ಕಾರ್ಯತಂತ್ರಗಳ ಬಗ್ಗೆ ಕೂಡ ವಿವರ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರಕಾರಕ್ಕೆ ನಿರ್ದೇಶಿಸಿದೆ. ಕೊರೋನ ಸಾಂಕ್ರಾಮಿಕ ರೋಗದಿಂದ ಅನಾಥರಾಗಿರುವ ಮಕ್ಕಳ ಸಂಖ್ಯೆಯ ಕುರಿತ ಮಾಹಿತಿಯೊಂದಿಗೆ ಎನ್ಸಿಪಿಸಿಆರ್ ಪೋರ್ಟಲ್ ಅನ್ನು ನವೀಕರಿಸುತ್ತಿರುವಂತೆ ಸುಪ್ರೀಂ ಕೋರ್ಟ್ ರಾಜ್ಯಗಳಿಗೆ ಸೂಚಿಸಿದೆ.
ನ್ಯಾಯಮೂರ್ತಿಗಳಾದ ಎಲ್. ನಾಗೇಶ್ವರ ರಾವ್ ಹಾಗೂ ಅನಿರುದ್ಧ ಬೋಸ್ ಅವರನ್ನೊಳಗೊಂಡ ನ್ಯಾಯಪೀಠ, ಪೋಷಕರನ್ನು ಕಳೆದುಕೊಂಡ ಹೆಚ್ಚು ಮಕ್ಕಳಿರುವ 10 ರಾಜ್ಯಗಳಾದ ತೆಲಂಗಾಣ, ತಮಿಳುನಾಡು, ಕೇರಳ, ಕರ್ನಾಟಕ, ಗುಜರಾತ್, ರಾಜಸ್ಥಾನ, ಉತ್ತರಪ್ರದೇಶ, ಮಹಾರಾಷ್ಟ್ರ, ಬಿಹಾರ್ ಹಾಗೂ ಜಾರ್ಖಂಡ್ ನ ಪ್ರಕರಣಗಳನ್ನು ಸೋಮವಾರ ವಿಚಾರಣೆ ನಡೆಸಲಿದೆ ಎಂದು ಹೇಳಿದೆ.
23 ವರ್ಷವಾದಾಗ 10 ಲಕ್ಷ ರೂಪಾಯಿ ಬಂಡವಾಳ ನಿಧಿ ಹಾಗೂ ಶಿಕ್ಷಣದ ವೆಚ್ಚವನ್ನು ಭರಿಸುವುದು ಸೇರಿದಂತೆ ಕೊರೋನದಿಂದ ಹೆತ್ತವರನ್ನು ಕಳೆದುಕೊಂಡ ಮಕ್ಕಳಿಗೆ ಹಲವು ಕಲ್ಯಾಣ ಕ್ರಮಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಘೋಷಿಸಿದ್ದರು. ಅಂತಹ ಮಕ್ಕಳಿಗೆ ಬೆಂಬಲ ನೀಡಲು ಕೈಕೊಳ್ಳಬಹುದಾದ ಕ್ರಮಗಳ ಬಗೆಗಿನ ಚಿಂತನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಮಕ್ಕಳಿಗಿರುವ ಪಿಎಂ ಕೇರ್ಸ್ ಅಡಿಯ ಯೋಜನೆಯಲ್ಲಿ ನಾವು ನೆರವು ನೀಡಲಿದ್ದೇವೆ ಎಂದಿದ್ದರು. ಅನಾಥ ಮಕ್ಕಳ ಹೆಸರಿನಲ್ಲಿ ನಿರಖು ಠೇವಣಿ ಆರಂಭಿಸಲಾಗುವುದು ಎಂದು ಪ್ರಧಾನಿ ಅವರ ಕಚೇರಿ ಹೇಳಿದೆ.
ಅಲ್ಲದೆ, ಪಿಎಂ ಕೇರ್ಸ್ ನಿಧಿಯು ವಿಶೇಷವಾಗಿ ವಿನ್ಯಾಸಗೊಳಿಸಿದ ಯೋಜನೆಯ ಮೂಲಕ ಅಂತಹ ಪ್ರತಿಯೊಬ್ಬರಿಗೂ 10 ಲಕ್ಷ ರೂಪಾಯಿ ನೀಡಲಿದೆ ಎಂದು ಅದು ತಿಳಿಸಿದೆ. ಈ ನಿಧಿಯನ್ನು 18 ವರ್ಷದಿಂದ 5 ವರ್ಷಗಳ ಉನ್ನತ ಶಿಕ್ಷಣ ಸಂದರ್ಭದಲ್ಲಿ ಅತನ ಅಥವಾ ಆಕೆಯ ವೈಯುಕ್ತಿಕ ಅವಶ್ಯಕತೆಯನ್ನು ನೋಡಿಕೊಳ್ಳಲು ತಿಂಗಳ ಹಣಕಾಸು ಬೆಂಬಲ ಅಥವಾ ಶಿಷ್ಯವೇತನ ನೀಡಲು ಬಳಸಲಾಗುವುದು. ಆತ ಅಥವಾ ಆಕೆ 23 ವರ್ಷ ತಲುಪಿದಾಗ ವೈಯುಕ್ತಿಕ ಹಾಗೂ ವೃತ್ತಿಪರ ಉದ್ದೇಶಗಳಿಗೆ ಬಳಸಲು ಒಂದು ದೊಡ್ಡ ಮೊತ್ತವನ್ನು ಅವರು ಪಡೆಯಲಿದ್ದಾರೆ.
ಈ ಹಿಂದೆ ಶುಕ್ರವಾರ ಸುಪ್ರೀಂ ಕೋರ್ಟ್, ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಹೆತ್ತವರನ್ನು ಕಳೆದುಕೊಂಡ ಮಕ್ಕಳನ್ನು ಕೂಡಲೇ ಗುರುತಿಸುವಂತೆ ಹಾಗೂ ಪರಿಹಾರ ಒದಗಿಸುವಂತೆ ಸೂಚಿಸಿತ್ತು. ಅಲ್ಲದೆ, ಬೀದಿಯಲ್ಲಿ ಹಸಿವಿನಿಂದ ಬಳಲುತ್ತಿರುವ ಮಕ್ಕಳ ನೋವನ್ನು ಅರ್ಥ ಮಾಡಿಕೊಳ್ಳುವಂತೆ ರೂಜ್ಯ ಸರಕಾರಗಳಿಗೆ ತಿಳಿಸಿತ್ತು. ನ್ಯಾಯಾಲಯದ ಯಾವುದೇ ಆದೇಶಕ್ಕೆ ಕಾಯದೆ ಕೂಡಲೇ ಪಾಲನಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಜಿಲ್ಲಾಡಳಿತಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶಿಸಿತ್ತು.







