ಗಲ್ವಾನ್ ಘರ್ಷಣೆಯ ಸಾವು ನೋವುಗಳ ವಿವರ ಪೋಸ್ಟ್ ಮಾಡಿದ್ದ ಚೀನಿ ಬ್ಲಾಗರ್ ಗೆ 8 ತಿಂಗಳು ಜೈಲು
ಬೀಜಿಂಗ್,ಜೂ.1: ಪೂರ್ವ ಲಡಾಕ್ನ ಗಡಿನಿಯಂತ್ರಣ ರೇಖೆಯಲ್ಲಿರುವ ಗಲ್ವಾನ್ ಕಣಿವೆಯಲ್ಲಿ ಭಾರತದ ಸೇನೆಯ ಜೊತೆಗೆ ನಡೆದ ಘರ್ಷಣೆಯಲ್ಲಿ ಚೀನಿ ಸೇನೆಯಲ್ಲಿ ಉಂಟಾಗಿದ್ದ ಸಾವುನೋವುಗಳ ಬಗ್ಗೆ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಕ್ಕಾಗಿ ಈ ವರ್ಷದ ಆರಂಭದಲ್ಲಿ ಬಂಧಿತನಾಗಿದ್ದ ಚೀನಿ ಬ್ಲಾಗರ್ ಕಿಯು ಝಿಮಿಂಗ್ ಗೆ ಸೋಮವಾರ ಎಂಟು ತಿಗಳುಗಳ ಜೈಲು ಶಿಕ್ಷೆ ವಿಧಿಸಿದೆ.
ಕಿಯು ಅವರು ಹುತಾತ್ಮರನ್ನು ಅಪಮಾನಿಸಿದ್ದಾರೆಂದು ಪೂರ್ವ ಝಿಯಾಂಗ್ಸು ಪ್ರಾಂತದ ನಾನ್ಜಿಂಗ್ ನ್ಯಾಯಾಲಯ ತೀರ್ಪಿನಲ್ಲಿ ತಿಳಿಸಿದೆ. ಅಲ್ಲದೆ ಹತ್ತು ದಿನಗಳೊಳಗೆ ದೇಶದ ಪ್ರಮುಖ ಜಾಲತಾಣ ಪೋರ್ಟಲ್ ಗಳಲ್ಲಿ ಹಾಗೂ ರಾಷ್ಟ್ರೀಯ ಮಾಧ್ಯಮಗ ಮೂಲಕ ಕ್ಷಮೆಯಾಚಿಸಬೇಕೆಂದು ಅವರಿಗೆ ಆದೇಶಿಸಿದೆ.
ಕಿಯು ತನ್ನ ‘ಅಪರಾಧವನ್ನು ಸತ್ಯಸಂಧತೆಯೊಂದಿಗೆ ಒಪ್ಪಿಕೊಂಡಿದ್ದಾರೆ ಹಾಗೂ ಇಂತಹ ತಪ್ಪನ್ನು ತಾನು ಮತ್ತೊಮ್ಮೆ ಮಾಡಲಾರೆ’ ಎಂದು ನ್ಯಾಯಾಲಯಕ್ಕೆ ತಿಳಿಸಿರುವುದರಿಂದ ಆತನಿಗೆ ಲಘುವಾದ ಶಿಕ್ಷೆಯನ್ನು ವಿಧಿಸಿರುವುದಾಗಿ ನ್ಯಾಯಾಧೀಶರು ತೀರ್ಪು ಪ್ರಕಟಿಸಿದ ಸಂದರ್ಭ ತಿಳಿಸಿದ್ದಾರೆ.
‘ವೀಕ್ಲಿ ಇಕನಾಮಿಕ್ ಆಬ್ಸರ್ವರ್’ ಪತ್ರಿಕೆಯ ಮಾಜಿ ವರದಿಗಾರನಾದ ಕಿಯು ತನ್ನ ಬ್ಲಾಗ್ನಲ್ಲಿ ಪ್ರಸಾರ ಮಾಡಿದ್ದ ಎರಡು ಪೋಸ್ಟ್ ಗಳಲ್ಲಿ ಅತ್ಯುನ್ನತ ದರ್ಜೆಯ ಸೇನಾಧಿಕಾರಿಯೆಂಬ ಕಾರಣದಿಂದಾಗಿ ಗಲ್ವಾನ್ ಸಂಘರ್ಷದಲ್ಲಿ ಕಮಾಂಡರ್ ಓಬ್ಬರು ಬದುಕುಳಿದಿದ್ದಾರೆ ಎಂದು ಹೇಳಿದ್ದರು. ಅಲ್ಲದೆ ಅಧಿಕಾರಿಗಳು ಬಹಿರಂಗಪಡಿಸಿದ್ದಕ್ಕಿಂತ ಅಧಿಕ ಸಂಖ್ಯೆಯ ಚೀನಿ ಸೈನಿಕರು ಮೃತಪಟ್ಟಿದ್ದಾರೆಂದು ಕಿಯು ಬ್ಲಾಗ್ ನಲ್ಲಿ ಬರೆದಿದ್ದರು.





