ಉಡುಪಿ: ಕೊರೋನಕ್ಕೆ ದಿನದಲ್ಲಿ 3 ಬಲಿ; 735 ಮಂದಿಗೆ ಕೋವಿಡ್ ಸೋಂಕು
ಉಡುಪಿ, ಜೂ.1: ಮಂಗಳವಾರ ಜಿಲ್ಲೆಯಲ್ಲಿ ಮೂವರು ಕೊರೋನ ಸೋಂಕಿಗೆ ಬಲಿಯಾಗಿದ್ದು, ಈ ಮೂಲಕ ಸಾಂಕ್ರಾಮಿಕ ರೋಗಕ್ಕೆ ಬಲಿಯಾ ದವರ ಒಟ್ಟು ಸಂಖ್ಯೆ 336ಕ್ಕೇರಿದೆ. ಇಂದು ಜಿಲ್ಲೆಯಲ್ಲಿ ಸೋಂಕಿನ ಪಾಸಿಟಿವ್ ದೃಢಗೊಂಡವರ ಸಂಖ್ಯೆ 735ಕ್ಕೇರಿದೆ. 619 ಮಂದಿ ಚಿಕಿತ್ಸೆಯಿಂದ ಗುಣಮುಖ ರಾದರೆ ಸದ್ಯ ಜಿಲ್ಲೆಯಲ್ಲಿ 5205 ಮಂದಿ ಸೋಂಕಿಗೆ ಸಕ್ರಿಯರಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗಭೂಷಣ ಉಡುಪ ತಿಳಿಸಿದ್ದಾರೆ.
ಇಂದು ಜಿಲ್ಲೆಯಲ್ಲಿ ಮೃತಪಟ್ಟ ಮೂವರಲ್ಲಿ ಕುಂದಾಪುರದ ಇಬ್ಬರು ಪುರುಷರು (55, 69 ವರ್ಷ) ಹಾಗೂ ಉಡುಪಿಯ 62 ವರ್ಷ ಪ್ರಾಯದ ಮಹಿಳೆ ಸೇರಿದ್ದಾರೆ. ಇವರೆಲ್ಲರೂ ಕೊರೋನ ರೋಗಲಕ್ಷಣದೊಂದಿಗೆ ಗಂಭೀರ ಉಸಿರಾಟದ ತೊಂದರೆ ಸೇರಿದಂತೆ ಇತರ ಸಮಸ್ಯೆ ಚಿಕಿತ್ಸೆಗೆ ದಾಖಲಾಗಿದ್ದರು.
ಸೋಮವಾರ ಪಾಸಿಟಿವ್ ಬಂದ 735 ಮಂದಿಯಲ್ಲಿ 351 ಮಂದಿ ಪುರುಷರು ಹಾಗೂ 384 ಮಂದಿ ಮಹಿಳೆಯರು. ಇವರಲ್ಲಿ ಉಡುಪಿ ತಾಲೂಕಿನ 277, ಕುಂದಾಪುರ ತಾಲೂಕಿನ 201 ಹಾಗೂ ಕಾರ್ಕಳ ತಾಲೂಕಿನ 252 ಮಂದಿ ಇದ್ದು, ಉಳಿದ ಐವರು ಹೊರಜಿಲ್ಲೆಯವರು. ಇವರಲ್ಲಿ 27 ಮಂದಿ ಕೋವಿಡ್ ಆಸ್ಪತ್ರೆ ಹಾಗೂ 708 ಮಂದಿ ಹೋಮ್ ಐಸೋಲೇಷನ್‌ಗೆ ದಾಖಲಾಗಿದ್ದಾರೆ.
ಸೋಮವಾರ 619 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಜಿಲ್ಲೆಯಲ್ಲಿ ಈವರೆಗೆ ಕೊರೋನದಿಂದ ಚೇತರಿಸಿಕೊಂಡವರ ಸಂಖ್ಯೆ ಈಗ 53,921ಕ್ಕೇರಿದೆ. ನಿನ್ನೆ ಜಿಲ್ಲೆಯ 3426 ಮಂದಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಸೋಂಕಿಗೆ ಪಾಸಿಟಿವ್ ಬಂದವರ ಸಂಖ್ಯೆ 59,462 ಆಗಿದೆ ಎಂದು ಡಾ. ನಾಗಭೂಷಣ ತಿಳಿಸಿದರು.
ಉಡುಪಿ ಜಿಲ್ಲೆಯಲ್ಲಿ ಈವರೆಗೆ ಒಟ್ಟು 5,95,895 ಮಂದಿಯನ್ನು ಕೋವಿಡ್ ಪರೀಕ್ಷೆಗೊಳಪಡಿಸಲಾಗಿದೆ.
ಕಪ್ಪು ಶಿಲೀಂದ್ರ ಸೋಂಕಿನ ಯಾವುದೇ ಹೊಸ ಪ್ರಕರಣ ಇಂದು ವರದಿ ಯಾಗಿಲ್ಲ. ಜಿಲ್ಲೆಯ ನಾಲ್ವರು ಈಗ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದಾರೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.







