ಉತ್ತಮ ಮೊಬೈಲ್ ನೆಟ್‌ವರ್ಕ್ ಸೌಲಭ್ಯ ಒದಗಿಸಲು ಸಂಸದ ನಳಿನ್ ಸೂಚನೆ
ಮಂಗಳೂರು, ಜೂ.1:ದ.ಕ. ಜಿಲ್ಲೆಯ ಜನವಸತಿ ಪ್ರದೇಶಗಳಲ್ಲಿ ವಿವಿಧ ಕಂಪೆನಿಗಳು ಮೊಬೈಲ್ ನೆಟ್‌ವರ್ಕ್ ಸೌಲಭ್ಯ ಒದಗಿಸಿ ಗ್ರಾಹಕರಿಗೆ ಉತ್ತಮ ಸೇವೆ ಸಲ್ಲಿಸಬೇಕು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಸೂಚನೆ ನೀಡಿದರು.
ಜಿಲ್ಲೆಯಲ್ಲಿನ ಮೊಬೈಲ್ ನೆಟ್‌ವರ್ಕ್ ಸಮಸ್ಯೆ ಕುರಿತು ದ.ಕ.ಜಿಪಂ ನೇತ್ರಾವತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಜಿಲ್ಲೆಯ ಹೆಚ್ಚಿನ ಭಾಗಗಳಲ್ಲಿ ಮೊಬೈಲ್ ನೆಟ್‌ವರ್ಕ್ ಸಮಸ್ಯೆಯಿಂದಾಗಿ ಸರಕಾರದ ಅನೇಕ ಸೌಲಭ್ಯಗಳನ್ನು ಒದಗಿಸುವುದು ಸಾಧ್ಯವಾಗುತ್ತಿಲ್ಲ. ಜನಸಾಮಾನ್ಯರು ದೈನಂದಿನ ದೂರವಾಣಿ ಸೌಲಭ್ಯವನ್ನು ಉಪಯೋಗಿಸಲು ತೊಂದರೆ ಉಂಟಾಗುತ್ತಿದೆ. ನೆಟ್‌ವರ್ಕ್ ಸಮಸ್ಯೆಯಿಂದ ಕೋವಿಡ್ ಸೋಂಕಿತರಿಗೆ ಮೆಡಿಕಲ್ ಚಿಕಿತ್ಸೆ ನೀಡಲು, ಪಡಿತರ ವಿತರಿಸಲು, ಜಿ.ಪಿ.ಎಸ್ ಆಧಾರದ ಮೇಲೆ ಗೃಹ ನಿರ್ಮಾಣದ ಅನುದಾನ ನೀಡಲು ಸಾಧ್ಯವಾಗಿಲ್ಲ. ಕೊರೋನದಿಂದ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿಗಳು ನಡೆಸಲು ಆಗುತ್ತಿಲ್ಲ. ಇದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಹಾಗೂ ವರ್ಕ್‌ಫ್ರಮ್ ಹೋಮ್ ನಡಿ ಕಾರ್ಯನಿರ್ವಹಿಸುತ್ತಿರುವವರಿಗೆ ಸಮಸ್ಯೆ ಉಂಟಾಗಿ ಎತ್ತರ ಪ್ರದೇಶಗಳನ್ನು ಹುಡುಕಿಕೊಂಡು ಹೋಗುವಂತಹ ಪರಿಸ್ಥಿತಿ ಉಂಟಾಗಿದೆ ಎಂದರು.
ಸರಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಮುಂಚೂಣಿ ಟೆಲಿ ಕಂಪೆನಿಯಾಗಿದ್ದರೂ ಕೂಡ ಜಿಲ್ಲೆಯ ಗ್ರಾಹಕರುಗಳಿಗೆ ಉತ್ತಮ ಗುಣಮಟ್ಟದ ಸೇವೆಗಳನ್ನು ಒದಗಿಸುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದ ಸಂಸದ ನಳಿನ್ ಮುಂದಿನ ದಿನಗಳಲ್ಲಿ ಹೀಗಾಗದಂತೆ ನೋಡಿಕೊಳ್ಳಲು ಯೋಜನೆಯನ್ನು ರೂಪಿಸಬೇಕು ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮೀನುಗಾರಿಕೆ ಮತ್ತು ಬಂದರು ಸಚಿವ ಎಸ್. ಅಂಗಾರ, ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಮಾತನಾಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪ್ರಜ್ಞಾ ಅಮ್ಮೆಂಬಳ, ಶಾಸಕರಾದ ಉಮಾನಾಥ್ ಕೋಟ್ಯಾನ್, ಭರತ್ ವೈ. ಶೆಟ್ಟಿ, ಹರೀಶ್ ಪೂಂಜಾ, ರಾಜೇಶ್ ನಾಯಕ್, ಸಂಜೀವ ಮಠಂದೂರ್, ಪ್ರತಾಪ್ ಸಿಂಹ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.
ಜಿಲ್ಲೆಯ 223 ಗ್ರಾಪಂ ವ್ಯಾಪ್ತಿಯಲ್ಲಿ 676 ಮೊಬೈಲ್ ಟವರ್‌ಗಳು ಕಾರ್ಯನಿರ್ವಹಿಸುತ್ತಿವೆ. ಬಂಟ್ವಾಳ ತಾಲೂಕಿನಲ್ಲಿ 5, ಬೆಳ್ತಂಗಡಿ ತಾಲೂಕಿನಲ್ಲಿ 1, ಕಡಬ ತಾಲೂಕಿನಲ್ಲಿ 2, ಮಂಗಳೂರು ತಾಲೂಕಿನಲ್ಲಿ 5, ಪುತ್ತೂರು ತಾಲೂಕಿನಲ್ಲಿ 5 ಹಾಗೂ ಸುಳ್ಯ ತಾಲೂಕಿನಲ್ಲಿ 7, ಮೂಡುಬಿದಿರೆ ತಾಲೂಕಿನಲ್ಲಿ 1 ಹೀಗೆ ಹೊಸದಾಗಿ ನಿರ್ಮಾಣ ಮಾಡಲು 26 ಅರ್ಜಿಗಳು ಬಾಕಿ ಇವೆ. ಅದಕ್ಕೆ ಕೆಲವು ಜನರಿಂದ ಮೊಬೈಲ್ ಟವರ್ ನಿರ್ಮಾಣಕ್ಕೆ ಆಕ್ಷೇಪಗಳು ಮತ್ತು ಕೆಲವೊಂದು ಕಂಪೆನಿಗಳು ತಮ್ಮ ವಾರ್ಷಿಕ ಶುಲ್ಕವನ್ನು ಪಾವತಿ ಮಾಡದೆ ಇರುವುದು ಕಾರಣವಾಗಿದೆ ಎಂದು ದ.ಕ.ಜಿಪಂ ಸಿಇಒ ಡಾ. ಕುಮಾರ್ ಸಭೆಗೆ ಮಾಹಿತಿ ನೀಡಿದರು.
ಗ್ರಾಮೀಣ ಪ್ರದೇಶದಲ್ಲಿ ನಿರ್ಮಾಣವಾಗಿರುವ ಪ್ರತಿಯೊಂದು ಟವರ್‌ಗಳಿಗೆ ಸರಕಾರ ವಿಧಿಸಿರುವ ವಾರ್ಷಿಕ 12,000 ರೂ. ಶುಲ್ಕವನ್ನು ಪಾವತಿ ಮಾಡಬೇಕು. ಆದರೆ ಈವರೆಗೆ ವಿವಿಧ ಕಂಪೆನಿಗಳು 83 ಲಕ್ಷ ರೂ. ಬಾಕಿ ಇರಿಸಿವೆ. ಅದರಲ್ಲಿ ಬಂಟ್ವಾಳ ತಾಲೂಕಿನಲ್ಲಿ 47 ಲಕ್ಷ ರೂ., ಬೆಳ್ತಂಗಡಿ ತಾಲೂಕಿನಲ್ಲಿ 9 ಲಕ್ಷ ರೂ., ಕಡಬ ತಾಲೂಕಿನಲ್ಲಿ 2 ಲಕ್ಷ ರೂ., ಮಂಗಳೂರು ತಾಲೂಕಿನಲ್ಲಿ 1.80 ಲಕ್ಷ ರೂ., ಪುತ್ತೂರು ತಾಲೂಕಿನಲ್ಲಿ 17 ಲಕ್ಷ ರೂ.. ಮೂಡುಬಿದಿರೆ ತಾಲೂಕಿನಲ್ಲಿ 1.20 ಲಕ್ಷ ರೂ., ಸುಳ್ಯ ತಾಲೂಕಿನಲ್ಲಿ 4 ಲಕ್ಷ ರೂ. ಸೇರಿದೆ ಎಂದರು.







