ಗುಜರಾತ್ ನಲ್ಲಿ ಬ್ಲ್ಯಾಕ್ ಫಂಗಸ್ ಪ್ರಕರಣಗಳ ವರದಿಗೆ ಸೂಕ್ತ ವ್ಯವಸ್ಥೆಯ ಕೊರತೆ ಉಲ್ಲೇಖಿಸಿ ಹೈಕೋರ್ಟ್ ಗೆ ಮನವಿ
ಹೊಸದಿಲ್ಲಿ, ಜೂ. 1: ಕೊರೋನದಿಂದ ಚೇತರಿಸಿಕೊಂಡ ವ್ಯಕ್ತಿಗಳಲ್ಲಿ ಬ್ಲ್ಯಾಕ್ ಫಂಗಸ್ ಸೋಂಕನ್ನು ನಿರ್ವಹಿಸುವಲ್ಲಿ ತೆಗೆದುಕೊಂಡ ಕ್ರಮಗಳು ಹಾಗೂ ಅದರ ಚಿಕಿತ್ಸೆಗೆ ಬಳಸುವ ಔಷದ ಆ್ಯಂಪೋಟೆರ್ಸಿನ್-ಬಿ ಖರೀದಿ ಕುರಿತಂತೆ ಸಲ್ಲಿಸಿದ ಮನವಿಗೆ ಪ್ರತಿಕ್ರಿಯೆ ನೀಡುವಂತೆ ಸೂಚಿಸಿ ಗುಜರಾತ್ ಉಚ್ಚ ನ್ಯಾಯಾಲಯ ಮಂಗಳವಾರ ಗುಜರಾತ್ ಸರಕಾರಕ್ಕೆ ನೋಟಿಸು ಜಾರಿ ಮಾಡಿದೆ.
ರಾಜ್ಯದಲ್ಲಿ ಕೊರೋನ ಸಾಂಕ್ರಾಮಿಕ ರೋಗ ನಿರ್ವಹಣೆಯ ಕುರಿತ ಸ್ವಯಂಪ್ರೇರಿತ ಮನವಿಯೊಂದಿಗೆ ಈ ಮನವಿಯನ್ನು ಸೇರಿಸಿ ಉಚ್ಚ ನ್ಯಾಯಾಲಯ ಈಗಾಗಲೇ ವಿಚಾರಣೆ ನಡೆಸಿದೆ. ಬ್ಲಾಕ್ ಫಂಗಸ್ ಕುರಿತ ಮನವಿಯ ಮುಂದಿನ ವಿಚಾರಣೆಯನ್ನು ಉಚ್ಚ ನ್ಯಾಯಾಲಯ ಜೂನ್ 15ರಂದು ನಡೆಸಲಿದೆ.
ಗುಜರಾತ್ ನಲ್ಲಿ ಬ್ಲ್ಯಾಕ್ ಫಂಗಸ್ ಪ್ರಕರಣಗಳ ಬಗ್ಗೆ ವರದಿ ಮಾಡಲು ಸೂಕ್ತ ವ್ಯವಸ್ಥೆ ಇಲ್ಲ. ಬ್ಲಾಕ್ ಫಂಗಸ್ ಸೋಂಕಿನ ಪ್ರಕರಣಗಳ, ಚೇತರಿಕೆಯಾದವರ ಹಾಗೂ ಸಾವನ್ನಪ್ಪಿದವರ ಸಂಖ್ಯೆ ಸಾಂಕ್ರಾಮಿಕ ರೋಗಗಳ ಕಾಯ್ದೆ ಅಡಿಯಲ್ಲಿ ಸಾರ್ವಜನಿಕರಿಗೆ ಲಭ್ಯವಾಗಬೇಕು ಎಂದು ಕೋರಿ ದೂರುದಾರರಾದ ಮೈತ್ರಿ ಮುಜುಮ್ದಾರ್ ಹಾಗೂ ಖುಶ್ ವಛರಜನಿ ಅವರು ಉಚ್ಚ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿದ್ದರು.
ಕಳೆದ ತಿಂಗಳು ಕೇಂದ್ರ ಸರಕಾರ ಬ್ಲ್ಯಾಕ್ ಫಂಗಸ್ ಸೋಂಕನ್ನು ಸಾಂಕ್ರಾಮಿಕ ರೋಗಗಳ ಕಾಯ್ದೆ 1897ರ ಅಡಿಯಲ್ಲಿ ಘೋಷಿಸುವಂತೆ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿತ್ತು. ಅದೇ ದಿನ ಗುಜರಾತ್ ಸರಕಾರ ಬ್ಲಾಕ್ ಫಂಗಸ್ ಅನ್ನು ಸಾಂಕ್ರಾಮಿಕ ರೋಗ ಎಂದು ಘೋಷಿಸಿತ್ತು.







