ಇಂಧನ ಬೆಲೆಗಳಲ್ಲಿ ಮತ್ತೆ ಏರಿಕೆ,ಹಲವಾರು ನಗರಗಳಲ್ಲಿ ಶತಕ ಬಾರಿಸಿದ ಪೆಟ್ರೋಲ್ ದರ

ಹೊಸದಿಲ್ಲಿ,ಜೂ.1: ಮಂಗಳವಾರ ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಮತ್ತೆ ಹೆಚ್ಚಿಸಲಾಗಿದ್ದು,ಸಾರ್ವಕಾಲಿಕ ದಾಖಲೆಗಳ ಸೃಷ್ಟಿಯನ್ನು ಮುಂದುವರಿಸಿವೆ. ಕಳೆದೊಂದು ತಿಂಗಳಿಗೂ ಕಡಿಮೆ ಅವಧಿಯಲ್ಲಿ ಇವೆರಡೂ ಇಂಧನಗಳ ಬೆಲೆಗಳು 17 ಸಲ ಏರಿಕೆ ಕಂಡಿವೆ. ದಿಲ್ಲಿಯಲ್ಲಿ ಪ್ರತಿ ಲೀ.ಪೆಟ್ರೋಲ್ ಮತ್ತು ಡೀಸೆಲ್ ಗೆ ಅನುಕ್ರಮವಾಗಿ 26 ಪೈಸೆ ಮತ್ತು 23 ಪೈಸೆ ಏರಿಕೆಯಾಗಿದ್ದು, ಬೆಲೆಗಳು 94.49 ರೂ. ಮತ್ತು 85.38 ರೂ.ಗೆ ತಲುಪಿವೆ.
ಕಳೆದ ವಾರ ಮುಂಬೈನಲ್ಲಿ ಮೊದಲ ಬಾರಿಗೆ ಶತಕದ ಗಡಿ ದಾಟಿದ್ದ ಪೆಟ್ರೋಲ್ ಬೆಲೆ ಮಂಗಳವಾರ ಪ್ರತಿ ಲೀ.ಗೆ 100.72 ರೂ.ಗೆ ಏರಿದೆ. ಡೀಸೆಲ್ ಬೆಲೆ ಪ್ರತಿ ಲೀ.ಗೆ 92.96 ರೂ. ಆಗಿದೆ.
ಮೇ 4ರಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿ ಪ್ರತಿ ಲೀ.ಗೆ ಅನುಕ್ರಮವಾಗಿ 4.09 ರೂ. ಮತ್ತು 4.65 ರೂ. ಏರಿಕೆಯಾಗಿದೆ. ರಾಜಸ್ಥಾನ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರಗಳ ಹಲವಾರು ನಗರಗಳಲ್ಲಿ ಪ್ರತಿ ಲೀ.ಪೆಟ್ರೋಲ್ ಬೆಲೆ ಈಗಾಗಲೇ ಶತಕವನ್ನು ದಾಟಿ ಮುನ್ನಡೆದಿದೆ.
Next Story





