ಸದ್ಯಕ್ಕೆ ಯಡಿಯೂರಪ್ಪನವರೇ ರಾಜ್ಯದ ಮುಖ್ಯಮಂತ್ರಿ, ಭವಿಷ್ಯದ ಬಗ್ಗೆ ನನಗೆ ಗೊತ್ತಿಲ್ಲ: ಸಿ.ಟಿ. ರವಿ

ಮೈಸೂರು,ಜೂ.1: ಸದ್ಯಕ್ಕೆ ಯಡಿಯೂರಪ್ಪನವರೆ ರಾಜ್ಯದ ಮುಖ್ಯಮಂತ್ರಿ, ಭವಿಷ್ಯದ ಬಗ್ಗೆ ನನಗೆ ಗೊತ್ತಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.
ನಗರದ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಸದ್ಯಕ್ಕೆ ಯಡಿಯೂರಪ್ಪನವರೇ ರಾಜ್ಯದ ಮುಖ್ಯಮಂತ್ರಿ. ಭವಿಷ್ಯದ ಬಗ್ಗೆ ನನಗೆ ಗೊತ್ತಿಲ್ಲ. ನಾನು ಇವತ್ತಿನ ಬಗ್ಗೆ ಮಾತ್ರ ಮಾತನಾಡಬಲ್ಲೆ. ನಾಳೆ ಬಗ್ಗೆ ನನಗೆ ಗೊತ್ತಿಲ್ಲ ಎಂದು ಹೇಳಿದರು.
ಬಿಜೆಪಿ ಸರ್ವಾನುಮತದಿಂದ ಯಡಿಯೂರಪ್ಪ ಅವರನ್ನು ಆಯ್ಕೆ ಮಾಡಿದೆ. ಕಾಂಗ್ರೆಸ್ ಹಾಗೂ ಇತರೆ ಪಕ್ಷಗಳು ಬಹುಮತದಿಂದ ಮುಖ್ಯಮಂತ್ರಿ ಆಯ್ಕೆ ಮಾಡಬಹುದು. ಆದರೆ ಸರ್ವಾನುಮತದಿಂದ ಸಾಧ್ಯವಿಲ್ಲ ಎಂದು ಹೇಳಿದರು.
ಮುಖ್ಯಮಂತ್ರಿ ಪುತ್ರ ವಿಜಯೇಂದ್ರ ದೆಹಲಿಗೆ ಹೋಗಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯಾರು ದೆಹಲಿಗೆ ಹೋಗಿದ್ದಾರೆ ಎಂಬುದು ಗೊತ್ತಿಲ್ಲ. ಈ ವಿಚಾರ ನನಗೇನು ಗೊತ್ತಿಲ್ಲ, ನನಗೆ ಸಂಬಂಧವಿಲ್ಲ. ವಿಜಯೇಂದ್ರ ಅವರು ಯಾವ ಕಾರಣಕ್ಕೆ ಹೋಗಿದ್ದಾರೆ ಎಂಬುದು ಗೊತ್ತಿಲ್ಲ. ವೈಯುಕ್ತಿಕ ಕಾರಣಕ್ಕೂ ಹೋಗಿರಬಹುದು. ಸದ್ಯ ಈ ವಿಚಾರದ ಬಗ್ಗೆ ನನಗೆ ಗೊತ್ತಿಲ್ಲ ಎಂದು ತಿಳಿಸಿದರು.
ನಾವು ಕಾಂಗ್ರೆಸ್ ಅನ್ನು ಜವಾಬ್ದಾರಿಯುತ ಪಕ್ಷ ಎಂದುಕೊಂಡಿದ್ದೆವು. ಕೋವಿಡ್ ಸಂದರ್ಭದಲ್ಲಿ ಸಹಕಾರದ ನಿರೀಕ್ಷೆ ಮಾಡಿದ್ದೆವು. ಆದರೆ ಸಹಕಾರದ ಬದಲು ಟೂಲ್ ಕಿಟ್ ಮೂಲಕ ಅರಾಜಕತೆ ಹುಟ್ಟುಹಾಕಿದ್ದಾರೆ. ಅಕ್ಸಿಜನ್ ಕೊರತೆ ಉಂಟಾದಾಗ ಅದನ್ನು ಸಮರ್ಥವಾಗಿ ಸಮಸ್ಯೆಗೆ ಪರಿಹಾರ ಹುಡುಕಿದ್ದೇವೆ. ಸಮರ್ಥವಾಗಿ ಕೊರೊನಾ ನಿಯಂತ್ರಣ ಮಾಡಲಾಗುತ್ತಿದೆ. ಆದರೆ ಕಾಂಗ್ರೆಸ್ ಮಾತ್ರ ತದ್ವಿರುದ್ಧವಾಗಿ ಕೆಲಸ ಮಾಡುತ್ತಿದೆ. ಕಾಂಗ್ರೆಸ್ ನವರಿಗೆ ಕೊರೋನ ಚೀನಿ ವೈರಸ್ ಎಂದು ಕರೆಯಲು ಧೈರ್ಯವಿಲ್ಲ. ಇಂಡಿಯನ್ ವೈರಸ್ ಎಂದು ಕಾಂಗ್ರೆಸ್ ಹೇಳುತ್ತಿದೆ. ಕಾಂಗ್ರೆಸ್ ಕೊರೋನವನ್ನು ವಿಜೃಂಭಿಸುವ ಕೆಲಸವನ್ನು ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಮೋದಿ ಆಡಳಿತ 70 ವರ್ಷ ನಮ್ಮನ್ನ ಹಿಂದಕ್ಕೆ ಕರೆದ್ಯೊಯ್ತು ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ತಿರುಗೇಟು ನೀಡಿದ ಸಿ.ಟಿ ರವಿ, ಕಾಂಗ್ರೆಸ್ ನಲ್ಲಿ ಗುಲಾಮಗಿರಿಯ ರಾಜಕಾರಣ ಮಾತ್ರ ಇರೋದು. ಅದರಲ್ಲಿ ನೀವು ಸೇರಿಕೊಂಡಿದ್ದೀರಿ. ಅದಕ್ಕಾಗಿ ನಿಮ್ಮ ಮೆದುಳು ಗುಲಾಮಗಿರಿಯ ತತ್ವವನ್ನ ಒಪ್ಪಿಕೊಂಡಿದೆ. ಹೀಗಾಗಿ ನೀವು ಹೀಗೆ ಮಾತನಾಡುತ್ತಿದ್ದೀರಾ ಎಂದು ಸಿದ್ದರಾಮಯ್ಯ ವಿರುದ್ದ ಹರಿಹಾಯ್ದರು.
ನಿಮ್ಮ ಮೆದುಳು 70 ವರ್ಷ ಹಿಂದಕ್ಕೆ ಹೋಗಿದ್ಯೋ. ನಿಮ್ಮ ಆಲೋಚನಾ ಶಕ್ತಿಯೇ ಕಳೆದು ಹೋಗಿದ್ಯೋ? ರಾಜ್ಯದಲ್ಲಿ ದೇಶದಲ್ಲಿ ಆಗಿರುವ ಅಭಿವೃದ್ಧಿ ದೇಶವನ್ನ ಹಿಂದಕ್ಕೆ ತೆಗೆದುಕೊಂಡು ಹೋಗಿರೋದಾ? ನಿಮಗೆ ಪಟ್ಟಿ ಕೊಡಲಾ ದೇಶಕ್ಕೆ ಹಿಂದಕ್ಕೆ ಹೋಗಿದ್ದು ಯಾವಾಗ, ಯಾರಿಂದ ಅಂತ? ಕಾಂಗ್ರೆಸ್‍ನಿಂದಲೇ ದೇಶ ಹಿಂದಕ್ಕೆ ಹೋಗಿರೋದು ಎಂದು ಕಿಡಿಕಾರಿದರು.







