ಕೋವಿಡ್ ಸೋಂಕಿನಿಂದ ಹೆತ್ತವರನ್ನು ಕಳೆದುಕೊಂಡ ಮಕ್ಕಳ ಹಿತರಕ್ಷಣೆಗೆ 6 ಹಂತದ ಯೋಜನೆ: ಸುಪ್ರೀಂಗೆ ಕೇಂದ್ರ ಮಾಹಿತಿ

ಹೊಸದಿಲ್ಲಿ, ಜೂ.1: ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ಹೆತ್ತವರನ್ನು ಕಳೆದುಕೊಂಡು ಅನಾಥರಾಗಿರುವ ಮಕ್ಕಳ ಯೋಗಕ್ಷೇಮದ ನಿಟ್ಟಿನಲ್ಲಿ 6 ಹಂತದ ಯೋಜನೆಯನ್ನು ರೂಪಿಸಲಾಗಿದೆ ಎಂದು ಮಕ್ಕಳ ಹಕ್ಕು ರಕ್ಷಣೆಗಾಗಿನ ರಾಷ್ಟ್ರೀಯ ಆಯೋಗ(ಎನ್ಸಿಪಿಸಿಆರ್) ಸುಪ್ರೀಂಕೋರ್ಟ್ ಗೆ ಮಂಗಳವಾರ ಮಾಹಿತಿ ನೀಡಿದೆ. ನೂತನವಾಗಿ ರಚಿಸಿದ ಬಾಲಸ್ವರಾಜ್ ಪೋರ್ಟಲ್ ನಲ್ಲಿ 9,346 ಮಕ್ಕಳ ಮಾಹಿತಿ ಅಪ್ಲೋಡ್ ಮಾಡಲಾಗಿದೆ. ಇದರಲ್ಲಿ 1,742 ಮಕ್ಕಳು ಇಬ್ಬರು ಹೆತ್ತವರನ್ನು, 7,464 ಮಕ್ಕಳು ಒಬ್ಬರನ್ನು ಕಳೆದುಕೊಂಡಿದ್ದರೆ 140 ಮಕ್ಕಳನ್ನು ಪರಿತ್ಯಜಿಸಲಾಗಿದೆ. 2020ರ ಮಾರ್ಚ್ ನಿಂದ 2021ರ ಮೇ 29ರವರೆಗಿನ ಮಾಹಿತಿ ಇದಾಗಿದೆ ಎಂದು ಸುಪ್ರೀಂಕೋರ್ಟ್ ಗೆ ಸಲ್ಲಿಸಿದ ಅಫಿದಾವಿತ್ ನಲ್ಲಿ ಉಲ್ಲೇಖಿಸಲಾಗಿದೆ.
ಇದರಲ್ಲಿ 1,224 ಮಕ್ಕಳು ಈಗ ಪೋಷಕರ ಜತೆ ವಾಸಿಸುತ್ತಿದ್ದರೆ 985 ಮಕ್ಕಳು ಕುಟುಂಬದ ಸದಸ್ಯರ ಜತೆ(ಕಾನೂನು ಪ್ರಕಾರ ಪೋಷಕರು ಎಂದು ನಿಯೋಜಿತಾಗದವರು), 6612 ಮಕ್ಕಳು ಏಕಪೋಷಕರ ಜತೆ ವಾಸಿಸುತ್ತಿದ್ದಾರೆ. 31 ಮಕ್ಕಳನ್ನು ವಿಶೇಷ ದತ್ತು ಮಂಡಳಿಯಲ್ಲಿದ್ದಾರೆ. ಗರಿಷ್ಟ ಸಂಖ್ಯೆಯ ಮಕ್ಕಳು ಅನಾಥರಾದ ಅಥವಾ ಪರಿತ್ಯಜಿಸಲ್ಪಟ್ಟ ಪ್ರಕರಣ ಮಧ್ಯಪ್ರದೇಶದಲ್ಲಿ (318 ಮಕ್ಕಳು ಅನಾಥ, 104 ಮಕ್ಕಳು ಪರಿತ್ಯಜಿಸಲ್ಪಟ್ಟಿದ್ದಾರೆ) ವರದಿಯಾಗಿದೆ.
ಏಕ ಪೋಷಕರನ್ನು ಕಳೆದುಕೊಂಡ ಮಕ್ಕಳ ಸಂಖ್ಯೆ ಉತ್ತರಪ್ರದೇಶದಲ್ಲಿ ಹೆಚ್ಚಿದೆ(1830 ಮಕ್ಕಳು). ಅಸುರಕ್ಷಿತ ವಲಯದಲ್ಲಿರುವ ಮಕ್ಕಳ ಸಂಖ್ಯೆಯೂ(ಅನಾಥರಾದವರು, ಪರಿತ್ಯಜಿಸಲ್ಪಟ್ಟವರು ಅಥವಾ ಒಬ್ಬರು ಪೋಷಕರನ್ನು ಕಳೆದುಕೊಂಡ ಮಕ್ಕಳು) ಉತ್ತರಪ್ರದೇಶದಲ್ಲಿ ಹೆಚ್ಚಿದೆ(2110 ಮಕ್ಕಳಿದ್ದಾರೆ). ಬಿಹಾರ 2ನೇ ಸ್ಥಾನದಲ್ಲಿದ್ದು ಇಲ್ಲಿ 1,327 ಮಕ್ಕಳು ಅಸುರಕ್ಷಿತ ವಲಯದಲ್ಲಿದ್ದಾರೆ. ಅಸುರಕ್ಷಿತ ವಲಯದಲ್ಲಿರುವ ಮಕ್ಕಳಲ್ಲಿ 788 ಮಕ್ಕಳು 3 ವರ್ಷಕ್ಕಿಂತ ಕೆಳಗಿನವರು. 4ರಿಂದ 7 ವರ್ಷದವರು 1,515, 8ರಿಂದ 13 ವರ್ಷದವರು 3,711, 14ರಿಂದ 15 ವರ್ಷದವರು 1,620, 16ರಿಂದ 17 ವರ್ಷದ 1,712 ಮಕ್ಕಳಿದ್ದಾರೆ. ಕೊರೋನದಿಂದ ಒಬ್ಬರು ಹೆತ್ತವರನ್ನು ಕಳೆದುಕೊಂಡು ಏಕಪೋಷಕರ ಜತೆಗಿರುವ ಮಕ್ಕಳಿಗೂ ಯೋಜನೆಯ ಆರ್ಥಿಕ ನೆರವು ಲಭ್ಯವಾಗಬೇಕು ಎಂದು ಆಯೋಗದ ಅಫಿದಾವಿತ್ನಲ್ಲಿ ಸಲಹೆ ನೀಡಲಾಗಿದೆ.
ಈ ಹಿನ್ನೆಲೆಯಲ್ಲಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಆಯೋಗವು ರಾಜ್ಯ ಸರಕಾರ, ಜಿಲ್ಲಾ ಶಿಕ್ಷಣಾಧಿಕಾರಿ ಹಾಗೂ ಶಾಲೆಗಳಿಗೆ ಶಿಫಾರಸು ಮಾಡಿದೆ. ಕೋವಿಡ್ ಸೋಂಕಿನಿಂದ ಅನಾಥರಾದ ಮಕ್ಕಳ ವಿವರ ಸಲ್ಲಿಸುವಂತೆ ಕಳೆದ ವಾರ ಸುಪ್ರೀಂಕೋರ್ಟ್ ವಿವಿಧ ರಾಜ್ಯಗಳಿಗೆ ಹಾಗೂ ಎನ್ಸಿಪಿಸಿಆರ್ಗೆ ಸೂಚಿಸಿತ್ತು.
ಪ್ರಮುಖ ಶಿಫಾರಸುಗಳು
► ಇಬ್ಬರು ಹೆತ್ತವರನ್ನೂ ಕಳೆದುಕೊಂಡ ಮಕ್ಕಳು ಖಾಸಗಿ ಶಾಲೆಗೆ ಸೇರ್ಪಡೆಯಾದರೆ, ಅಂತಹ ಮಕ್ಕಳ ಪ್ರಾಥಮಿಕ ಶಿಕ್ಷಣದ ಸಂಪೂರ್ಣ ವೆಚ್ಚವನ್ನು ಆರ್ಟಿಇ ಕಾಯ್ದೆ 2009ರ ಸೆಕ್ಷನ್ 12(1)(ಸಿ)ಯಡಿ ಸಂಬಂಧಿತ ರಾಜ್ಯ ಸರಕಾರಗಳು ಭರಿಸಬೇಕು.
► ಇದಕ್ಕೆ, ಅಂತಹ ಮಕ್ಕಳು ತಮ್ಮ ಪೋಷಕರು ಅಥವಾ ಕುಟುಂಬದ ಯಾವುದೇ ಸದಸ್ಯರ ಜತೆ ಅಥವಾ ಶಾಲೆಯ ಸಿಬಂದಿಯ ಜತೆ ಆಯಾ ಜಿಲ್ಲೆಯ ಮಕ್ಕಳ ಕಲ್ಯಾಣ ಸಮಿತಿ(ಸಿಡಬ್ಲ್ಯೂಸಿ)ಗೆ ಭೇಟಿ ನೀಡಬೇಕು. ಸಿಡಬ್ಲ್ಯೂಸಿಯ ದಾಖಲೆಯಲ್ಲಿ ನಮೂದಿಸಿದ ಬಳಿಕ ಈ ಮಕ್ಕಳನ್ನು ಆರ್ಟಿಇ ಫಲಾನುಭವಿಯ ಪಟ್ಟಿಗೆ ಸೇರಿಸಬೇಕು. ನಂತರ ಆಯಾ ಶಾಲೆಯು ಆ ಮಗುವಿನ ಶೈಕ್ಷಣಿಕ ವೆಚ್ಚವನ್ನು ಆರ್ಟಿಇ ಕಾಯ್ದೆಯಡಿ ಭರಿಸಲು ಕ್ರಮ ಕೈಗೊಳ್ಳಬೇಕು. ಇದು 1ರಿಂದ 8ನೇ ತರಗತಿಯ ಮಕ್ಕಳಿಗೆ ಕೈಗೊಳ್ಳಬೇಕಾದ ಕ್ರಮಗಳು.
► 8ನೇ ತರಗತಿಯ ನಂತರದ ಶಿಕ್ಷಣ ಆರ್ಟಿಇ ಕಾಯ್ದೆಯ ವ್ಯಾಪ್ತಿಯಲ್ಲಿ ಇಲ್ಲದ ಕಾರಣ, ಈ ಮಕ್ಕಳ ಶೈಕ್ಷಣಿಕ ವೆಚ್ಚವನ್ನು ಭರಿಸುವ ಬಗ್ಗೆ ಮಾರ್ಗಸೂಚಿ ರೂಪಿಸುವಂತೆ ರಾಜ್ಯ ಸರಕಾರಗಳಿಗೆ ಸೂಚಿಸಲಾಗಿದೆ.