ಮುಂಬೈನಲ್ಲಿ ಪೆಟ್ರೋಲ್ ಬೆಲೆ ನ್ಯೂಯಾರ್ಕ್‌ನ ದುಪ್ಪಟ್ಟು : ಅಂಕಿ ಅಂಶ

ಮುಂಬೈ: ಮಹಾನಗರದಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 100 ರೂಪಾಯಿಯ ಗಡಿ ದಾಟಿದ್ದು ವಿಶ್ವದಲ್ಲೇ ಪೆಟ್ರೋಲ್ ಬೆಲೆ ಅತ್ಯಂತ ದುಬಾರಿಯಾಗಿರುವ ದೇಶಗಳ ಪೈಕಿ ಭಾರತವೂ ಒಂದು. ಮುಂಬೈ ಪೆಟ್ರೋಲ್ ಬೆಲೆ ನ್ಯೂಯಾರ್ಕ್‌ನಲ್ಲಿರುವ ಬೆಲೆಯ ದುಪ್ಪಟ್ಟು ಎಂದು ಅಂಕಿ ಅಂಶಗಳ ವಿಶ್ಲೇಷಣೆಯಿಂದ ತಿಳಿದುಬರುತ್ತದೆ.
ಈ ವರ್ಷದ ಮೊದಲ ಐದು ತಿಂಗಳಲ್ಲಿ ಪೆಟ್ರೋಲ್ ಬೆಲೆಯಲ್ಲಿ ಶೇಕಡ 11ರಷ್ಟು ಏರಿಕೆಯಾಗಿ, 100.4 ರೂಪಾಯಿ ತಲುಪಿದೆ.
ಇದಕ್ಕೆ ಪ್ರತಿಯಾಗಿ ಅಮೆರಿಕದ ವಾಣಿಜ್ಯ ರಾಜಧಾನಿ ನ್ಯೂಯಾರ್ಕ್‌ನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 0.79 ಡಾಲರ್ ಅಂದರೆ ಸುಮಾರು 57 ರೂಪಾಯಿ ಎನ್ನುವುದು ನ್ಯೂಯಾರ್ಕ್‌ನ ರಾಜ್ಯ ಇಂಧನ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆಯ ಅಂಕಿ ಅಂಶಗಳಿಂದ ಕಂಡುಬರುತ್ತದೆ.
ಮೋದಿ ಸರ್ಕಾರ ಪದೇ ಪದೇ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಹೆಚ್ಚಿಸಿರುವುದು ಗ್ರಾಹಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಚಿಲ್ಲರೆ ಬೆಲೆಯ ಪೈಕಿ ತೆರಿಗೆ ಪಾಲು ಶೇಕಡ 60ರಷ್ಟಿದ್ದು, 2013ರಿಂದೀಚೆಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಆರು ಪಟ್ಟು ಹೆಚ್ಚಿದೆ ಎಂದು ಗ್ರಾಹಕರು ದೂರುತ್ತಿದ್ದಾರೆ.
ಕೋವಿಡ್-19 ಸಾಂಕ್ರಾಮಿಕದ ಎರಡನೇ ಅಲೆ ಪರಿಣಾಮವಾಗಿ ಸ್ಥಳೀಯ ಮಟ್ಟದಲ್ಲಿ ಲಾಕ್‌ಡೌನ್ ವಿಧಿಸಿರುವುದರಿಂದ ತೈಲ ಬಳಕೆ ಪ್ರಮಾಣ ಗಣನೀಯವಾಗಿ ಕುಸಿದಿದೆ. 2019ರ ಪೂರ್ವದಲ್ಲಿದ್ದ ತೈಲ ಬೇಡಿಕೆಗೆ ಹೋಲಿಸಿದರೆ ಮೇ ತಿಂಗಳಲ್ಲಿ ಇಂಧನ ಬೇಡಿಕೆ ಮೂರನೇ ಒಂದರಷ್ಟು ಕಡಿಮೆಯಾಗಿದೆ.
"ಬೆಲೆ ಕಡಿಮೆಯಾಗಲಿ ಅಥವಾ ಸರ್ಕಾರ ತೆರಿಗೆ ಕಡಿಮೆ ಮಾಡಲಿ ಎಂದು ಪ್ರಾರ್ಥಿಸುತ್ತಿದ್ದೇನೆ ಎಂದು ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್‌ನ ಹಣಕಾಸು ನಿರ್ದೇಶಕ ಎನ್.ವೇಣುಗೋಪಾಲ್ ಹೇಳುತ್ತಾರೆ. ಅದು ಆಗದಿದ್ದರೆ, ಚಿಲ್ಲರೆ ಮಾರಾಟ ದರ ಹೆಚ್ಚಿಸುವುದು ಬಿಟ್ಟು ಬೇರೆ ಮಾರ್ಗ ಇಲ್ಲ ಎಂದು ಅವರು ಹೇಳುತ್ತಾರೆ.