ಡಿಸೆಂಬರ್ ಒಳಗೆ ಎಲ್ಲರಿಗೂ ಲಸಿಕೆ : ಕೇಂದ್ರ ಸರ್ಕಾರ
ಗುರಿಸಾಧನೆಯಾಗುವ ಸಾಧ್ಯತೆ ಇಲ್ಲ ಎನ್ನುತ್ತಿದೆ ಅಂಕಿ ಅಂಶಗಳ ವಿಶ್ಲೇಷಣೆ

ಹೊಸದಿಲ್ಲಿ : ವರ್ಷಾಂತ್ಯದ ಒಳಗಾಗಿ ದೇಶದಲ್ಲಿ ಎಲ್ಲ ವಯಸ್ಕರಿಗೆ ಲಸಿಕೆ ವಿತರಿಸುವ ಮಹತ್ವಾಕಾಂಕ್ಷಿ ಗುರಿಯನ್ನು ಕೇಂದ್ರ ಸರ್ಕಾರ ಹಾಕಿಕೊಂಡಿದೆ. ಅಂದರೆ 188 ಕೋಟಿ ಡೋಸ್‌ಗಳನ್ನು ನೀಡಬೇಕಾಗುತ್ತದೆ. ಈ ಪೈಕಿ ಶೇಕಡ 89ರಷ್ಟು ಅಂದರೆ 167 ಕೋಟಿ ಡೋಸ್‌ಗಳನ್ನು ಮುಂದಿನ ಆರು ತಿಂಗಳಲ್ಲಿ ನೀಡಬೇಕಾಗಿದೆ. ಅಂದರೆ ಪ್ರತಿ ತಿಂಗಳು 23.8 ಕೋಟಿ ಡೋಸ್‌ಗಳನ್ನು ನೀಡುವ ಅಗತ್ಯವಿದೆ. ಇಲ್ಲದಿದ್ದರೆ ಗುರಿಸಾಧನೆಯಾಗುವ ಸಾಧ್ಯತೆ ಇಲ್ಲ ಎನ್ನುವುದು ಅಂಕಿ ಅಂಶಗಳ ವಿಶ್ಲೇಷಣೆಯಿಂದ ತಿಳಿದುಬರುತ್ತದೆ.
ದೇಶದಲ್ಲಿ 18 ವರ್ಷದ ಕೆಳಗಿನವರೂ ಸೇರಿದಂತೆ ಎಲ್ಲರಿಗೆ ಲಸಿಕೆ ನೀಡಬೇಕಾದರೆ ಒಟ್ಟು 251 ಕೋಟಿ ಲಸಿಕೆ ಡೋಸ್ ಅಗತ್ಯವಿದ್ದು, ತಿಂಗಳ ಬೇಡಿಕೆ 35.9 ಕೋಟಿ ಡೋಸ್ ಆಗುತ್ತದೆ.
ಲಸಿಕೆ ಅಭಿಯಾನದ ವೇಗವು ಕ್ರಿಕೆಟ್‌ನಲ್ಲಿ ರನ್ ಬೆನ್ನಟ್ಟುವಂತೆ. ಇನಿಂಗ್ಸ್ ಆರಂಭದಲ್ಲಿ ರನ್‌ರೇಟ್ ಕಡಿಮೆಯಾದಷ್ಟೂ ಅಂತಿಮ ಓವರ್‌ಗಳಲ್ಲಿ ಒತ್ತಡ ಹೆಚ್ಚುತ್ತದೆ. ಭಾರತ ಲಸಿಕೆ ಗುರಿ ತಲುಪುವ ವಿಚಾರದಲ್ಲೂ ಇದು ಅನ್ವಯವಾಗುತ್ತದೆ. ಆರಂಭಿಕ ತಿಂಗಳುಗಳಲ್ಲಿ ಕಡಿಮೆ ಲಸಿಕೆ ನೀಡಿದಷ್ಟೂ ಕೊನೆಯ ತಿಂಗಳುಗಳಲ್ಲಿ ಹೊರೆ ಹೆಚ್ಚುತ್ತಾ ಹೋಗುತ್ತದೆ.
ಮೇ ಕೊನೆಯವರೆಗೆ ದೇಶದಲ್ಲಿ ವಿತರಿಸಲಾಗಿರುವ ಲಸಿಕೆ ಡೋಸ್‌ಗಳು ಕೇವಲ 21.5 ಕೋಟಿ. ಇದು ಚೀನಾ ಹಾಗೂ ಅಮೆರಿಕ ಹೊರತುಪಡಿಸಿದರೆ ವಿಶ್ವದಲ್ಲೇ ಮೂರನೇ ಗರಿಷ್ಠ ಸಂಖ್ಯೆ. ಕೋ-ವಿನ್ ಡ್ಯಾಷ್‌ಬೋರ್ಡ್ ಪ್ರಕಾರ, ದೇಶದಲ್ಲಿ ಗರಿಷ್ಠ ಲಸಿಕೆ ನೀಡಿಕೆ ಎಂದರೆ ದಿನಕ್ಕೆ 38 ಲಕ್ಷ. ಜೂನ್ ತಿಂಗಳಿಗೆ 12 ಕೋಟಿ ಲಸಿಕೆ ಲಭ್ಯವಾಗಲಿದೆ ಎಂದು ಸರ್ಕಾರ ಹೇಳಿದ್ದು, ಅಂದರೆ ದಿನಕ್ಕೆ 40 ಲಕ್ಷ ಲಸಿಕೆ ಡೋಸ್ ನೀಡಲು ಸಾಧ್ಯವಾಗುತ್ತದೆ. ಡಿಸೆಂಬರ್ ಒಳಗೆ ಎಲ್ಲ ವಯಸ್ಕರಿಗೆ ಲಸಿಕೆ ನೀಡಬೇಕಾದರೆ ತಿಂಗಳಿಗೆ 23.8 ಕೋಟಿ ಲಸಿಕೆ ಅಗತ್ಯವಿದೆ. ಆದರೆ ಜೂನ್‌ನಲ್ಲಿ ಲಭ್ಯವಿರುವ ಲಸಿಕೆ ಡೋಸ್‌ಗಳು 12 ಕೋಟಿ ಮಾತ್ರ. ಜುಲೈನಿಂದ ಮುಂದಿನ ಐದು ತಿಂಗಳಲ್ಲಿ ಉಳಿದ ಜನತೆಗೆ ಲಸಿಕೆ ನೀಡಬೇಕಾಗಿದ್ದು, ಮಾಸಿಕ ಬೇಡಿಕೆ 25.8 ಕೋಟಿಗೆ ಏರುತ್ತದೆ. ಸಾರ್ವತ್ರಿಕ ಲಸಿಕೆ ಹಾಕಿಸಲು 39.8 ಕೋಟಿ ಡೋಸ್ ಬೇಕಾಗುತ್ತದೆ ಎಂದು ಅಂಕಿ ಅಂಶಗಳ ವಿಶ್ಲೇಷಣೆಯಿಂದ ತಿಳಿದುಬರುತ್ತದೆ.