ದೇಶದ್ರೋಹಕ್ಕಾಗಿ ರಾಮ್ ದೇವ್ ವಿರುದ್ಧ ಪ್ರಕರಣ ದಾಖಲಿಸಲು ಕೋರಿ ಬಿಹಾರ ನ್ಯಾಯಾಲಯಕ್ಕೆ ಅರ್ಜಿ

ಪಾಟ್ನಾ,ಜೂ.2: ಅಲೋಪತಿ ವೈದ್ಯವಿಜ್ಞಾನ ಮತ್ತು ವೈದ್ಯರ ವಿರುದ್ಧ ಅವಮಾನಕಾರಿ ಹೇಳಿಕೆಗಳನ್ನು ನೀಡಿರುವದಕ್ಕಾಗಿ ಯೋಗಗುರು ಬಾಬಾ ರಾಮದೇವ ವಿರುದ್ಧ ದೇಶದ್ರೋಹ ಪ್ರಕರಣವನ್ನು ದಾಖಲಿಸುವಂತೆ ಕೋರಿ ಬಿಹಾರದ ಮುಝಫ್ಫರಪುರ ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಲಾಗಿದೆ ಎಂದು Outlookindia ವರದಿ ಮಾಡಿದೆ.
ಮುಝಫ್ಫರಪುರ ನಿವಾಸಿ ಜ್ಞಾನಪ್ರಕಾಶ ತನ್ನ ವಕೀಲ ಸುಧೀರಕುಮಾರ ಓಝಾ ಮೂಲಕ ಈ ಅರ್ಜಿಯನ್ನು ಸಿಜೆಎಂ ನ್ಯಾಯಾಲಯದಲ್ಲಿ ಸಲ್ಲಿಸಿದ್ದಾರೆ. ಜ್ಞಾನಪ್ರಕಾಶ ಹಿರಿಯ ರಾಜಕಾರಣಿಗಳು,ಬಾಲಿವುಡ್ ತಾರೆಯರು ಮತ್ತು ವಿದೇಶಿ ನಾಯಕರ ವಿರುದ್ಧ ನ್ಯಾಯಾಲಯಗಳಲ್ಲಿ ಅರ್ಜಿಗಳನ್ನು ಸಲ್ಲಿಸುವ ಮೂಲಕ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ.
ರಾಮ್ ದೇವ್ ಹೇಳಿಕೆಗಳು ಕುಟಿಲತನದಿಂದ ಕೂಡಿವೆ ಎಂದು ತನ್ನ ಅರ್ಜಿಯಲ್ಲಿ ಬಣ್ಣಿಸಿರುವ ಜ್ಞಾನಪ್ರಕಾಶ,ದೇಶದ್ರೋಹ ಮತ್ತು ವಂಚನೆಗೆ ಸಂಬಂಧಿಸಿದ ಐಪಿಸಿ ಕಲಮ್ ಗಳನ್ನು ಮತ್ತು ವಿಪತ್ತು ನಿರ್ವಹಣಾ ಕಾಯ್ದೆಯನ್ನು ಅವರ ವಿರುದ್ಧ ಹೇರುವಂತೆ ಕೋರಿದ್ದಾರೆ.
ನ್ಯಾಯಾಲಯವು ಅರ್ಜಿಯ ವಿಚಾರಣೆಯನ್ನು ಜೂ.7ಕ್ಕೆ ನಿಗದಿಗೊಳಿಸಿದೆ.