ಹಳ್ಳಿಗಳಲ್ಲಿ ಕೊರೋನ ತಡೆಗೆ ಕೊರೋನ ಮುಕ್ತ ಗ್ರಾಮ ಸ್ಪರ್ಧೆ: ಮಹಾರಾಷ್ಟ್ರ ಸರಕಾರ

ಮುಂಬೈ, ಜೂ.2: ರಾಜ್ಯದ ಗ್ರಾಮೀಣ ಪ್ರದೇಶಗಳಿಗೆ ಕೊರೋನ ಸೋಂಕು ಹರಡುವುದನ್ನು ತಡೆಗಟ್ಟುವಂತಹ ಕ್ರಮಗಳನ್ನು ಉತ್ತೇಜಿಸಲು ಮಹಾರಾಷ್ಟ್ರ ಸರಕಾರವು ಬುಧವಾರ ‘ಕೊರೋನ ಮುಕ್ತ ಗ್ರಾಮ ಸ್ಪರ್ಧೆ’ಯನ್ನು ಪ್ರಕಟಿಸಿದೆ.
ಕೊರೋನ ಸೋಂಕು ವ್ಯಾಪಿಸುವಿಕೆಯನ್ನು ಕಿತ್ತೊಗೆಯಲು ಕೆಲವು ಗ್ರಾಮಗಳು ನಡೆಸುತ್ತಿರುವ ಪ್ರಯತ್ನಗಳನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಇತ್ತೀಚೆಗೆ ಶ್ಲಾಘಿಸಿದ್ದರು ಹಾಗೂ ‘ನನ್ನ ಹಳ್ಳಿ ಕೊರೋನ ಮುಕ್ತ’ ಎಂಬ ಸ್ಪರ್ಧೆಯನ್ನು ಆರಂಭಿಸ ಲಾಗುವುದೆಂದು ತಿಳಿಸಿದ್ದರು.
ಮಹಾರಾಷ್ಟ್ರ ಗ್ರಾಮೀಣಾಭಿವೃದ್ಧಿ ಸಚಿವ ಹಸನ್ ಮುಶ್ರಿಫ್ ಈ ಬಗ್ಗೆ ಬುಧವಾರ ಹೇಳಿಕೆ ನೀಡಿ ಕೊರೋನ ಮುಕ್ತ ಗ್ರಾಮ ಸ್ಪರ್ಧೆಯಡಿ ಪ್ರತಿಯೊಂದು ಕಂದಾಯ ವಿಭಾಗದಲ್ಲಿ ಕೋವಿಡ್-19 ನಿರ್ವಹಣೆಯಲ್ಲಿ ಉತ್ತಮ ಕೆಲಸವನ್ನು ಕೈಗೊಂಡಿರುವ ಮೂರು ಗ್ರಾಮ ಪಂಚಾಯತ್ಗಳಿಗೆ ಪ್ರಶಸ್ತಿಗಳನ್ನು ನೀಡಲಾಗುವುದೆಂದು ತಿಳಿಸಿದ್ದಾರೆ.
ಪ್ರಥಮ ಬಹುಮಾನ 50 ಲಕ್ಷ ರೂ., ದ್ವಿತೀಯ ಬಹುಮಾನ 25 ಲಕ್ಷ ರೂ. ಹಾಗೂ ತೃತೀಯ ಬಹುಮಾನ 15 ಲಕ್ಷ ರೂ.ಗಳನ್ನು ಒಳಗೊಂಡಿರುವುದಾಗಿ ಸಚಿವರು ತಿಳಿಸಿದ್ದಾರೆ. ಮಹಾರಾಷ್ಟ್ರ ರಾಜ್ಯದಲ್ಲಿ ಒಟ್ಟು 6 ಕಂದಾಯ ವಿಭಾಗಗಳಿರುವುದರಿಂದ ಒಟ್ಟು 18 ಪ್ರಶಸ್ತಿಗಳಿರುತ್ತವೆ. ಈ ಬಹುಮಾನಗಳ ಒಟ್ಟು ಮೊತ್ತವು 5.4 ಕೋಟಿ ರೂ. ಆಗಿರುವುದು.
ಕೊರೋನ ಮುಕ್ತ ಗ್ರಾಮ ಸ್ಪರ್ಧೆಯ ವಿಜೇತ ಗ್ರಾಮಗಳಿಗೆ ಬಹುಮಾನ ಮೊತ್ತಕ್ಕೆ ಸಮಾನವಾದ ಹಣವನ್ನು ಪ್ರೋತ್ಸಾಹಧನವಾಗಿ ನೀಡಲಾಗುವುದೆಂದು ಸಚಿವರು ಹೇಳಿದ್ದಾರೆ. ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಗ್ರಾಮಗಳನ್ನು 22 ಮಾನದಂಡಗಳ ಆಧಾರದಲ್ಲಿ ಪ್ರಶಸ್ತಿಗೆ ಆಯ್ಕೆ ಮಾಡಲಾಗುವುದು. ಇದಕ್ಕಾಗಿ ಸಮಿತಿ ರಚಿಸಲಾಗುವುದು ಎಂದು ಮುಶ್ರಿಫ್ ತಿಳಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಬುಧವಾರ 14,123 ಕೋವಿಡ್-19 ಹೊಸ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 57,61,015ಕ್ಕೇರಿದೆ. 477 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ ಹಾಗೂ ಈ ಹಿಂದೆ ವರದಿಯಾಗದೆ ಇದ್ದ 377 ಕೊರೋನ ಸಾವಿನ ಸಂಖ್ಯೆಯನ್ನು ಅಧಿಕೃತವಾಗಿ ದಾಖಲಿಸಲಾಗಿದೆ. ಇದರೊಂದಿಗೆ ಆ ರಾಜ್ಯದಲ್ಲಿ ಕೋವಿಡ್-19 ನಿಂದ ಮೃತಪಟ್ಟವರ ಸಂಖ್ಯೆ 96198ಕ್ಕೇರಿದೆ ಎಂದು ಅಧಿಕೃತ ದತ್ತಾಂಶಗಳಿಂದ ತಿಳಿದುಬಂದಿದೆ.





