ಕೋವಿಡ್ ಮೂರನೇ ಅಲೆಯು ಎರಡರಷ್ಟೇ ತೀವ್ರವಿರಲಿದೆ, 98 ದಿನಗಳ ಕಾಲ ಉಳಿಯಬಹುದು: ಎಸ್ ಬಿಐ ವರದಿ

ಹೊಸದಿಲ್ಲಿ,ಜೂ.2: ಕೋವಿಡ್ ಮೂರನೇ ಅಲೆಯು ಎರಡನೇ ಅಲೆಯಷ್ಟೇ ತೀವ್ರವಿರಲಿದೆ ಮತ್ತು ಸರಾಸರಿ 98 ದಿನಗಳ ಅವಧಿಗೆ ಉಳಿಯಬಹುದು ಎಂದು ಎಸ್ ಬಿಐ ಬಿಡುಗಡೆಗೊಳಿಸಿರುವ ವರದಿಯು ತಿಳಿಸಿದೆ. ಆದರೆ ಲಸಿಕೆ ನೀಡಿಕೆಯನ್ನು ಹೆಚ್ಚಿಸುವುದರಿಂದ ಮತ್ತು ಆರೋಗ್ಯ ಮೂಲಸೌಕರ್ಯಗಳನ್ನು ಉತ್ತಮಗೊಳಿಸುವುದರಿಂದ ಕೋವಿಡ್ ಸಂಬಂಧಿತ ಸಾವುಗಳ ಸಂಖ್ಯೆಯನ್ನು ತಗ್ಗಿಸಬಹುದಾಗಿದೆ ಎಂದು ಅದು ಬೆಟ್ಟುಮಾಡಿದೆ.
ಶ್ರೀಮಂತ ದೇಶಗಳಲ್ಲಿ ಎರಡನೇ ಅಲೆಯ ಅವಧಿ 108 ದಿನಗಳಾಗಿದ್ದರೆ ಮೂರನೇ ಅಲೆಯ ಸರಾಸರಿ ಅವಧಿ 98 ದಿನಗಳಾಗಿವೆ. ಭಾರತವು ಮೂರನೇ ಅಲೆಯನ್ನು ಎದುರಿಸಲು ಸರಿಯಾದ ಸಿದ್ಧತೆಗಳನ್ನು ಮಾಡಿಕೊಂಡರೆ ಗಂಭೀರ ಪ್ರಕರಣ ದರವು (ಆಮ್ಲಜನಕ, ಐಸಿಯು ಇತ್ಯಾದಿಗಳು ಅಗತ್ಯವಿರುವ ರೋಗಗಳು) ಕಡಿಮೆಯಾಗುತ್ತದೆ ಮತ್ತು ಇದು ಕೆಲವೇ ಸಾವುಗಳಿಗೆ ಕಾರಣವಾಗುತ್ತದೆ ಎಂದು ಎಸ್ಬಿಐ ತನ್ನ ಐದು ಪುಟಗಳ ವರದಿ ‘ಎಕೊರ್ಯಾಪ್’ ನಲ್ಲಿ ತಿಳಿಸಿದೆ.
ಉತ್ತಮ ಮೂಲಸೌಕರ್ಯ ಮತ್ತು ತ್ವರಿತ ಲಸಿಕೆ ನೀಡಿಕೆಯಿಂದ ಮೂರನೇ ಅಲೆಯಲ್ಲಿ ಗಂಭಿರ ಪ್ರಕರಣಗಳು ಶೇ.20ರಿಂದ ಶೇ.5ಕ್ಕೆ ಇಳಿಕೆಯಾದರೆ ಮೂರನೇ ಅಲೆಯ ಸಾವುಗಳ ಸಂಖ್ಯೆ ಈಗಿನ 1.70 ಲ.ಕ್ಕೂ ಅಧಿಕ ಸಾವುಗಳಿಗೆ ಹೋಲಿಸಿದರೆ 40,000ಕ್ಕೆ ಗಣನೀಯವಾಗಿ ಇಳಿಯಲಿದೆ ಎಂದು ವರದಿಯು ಹೇಳಿದೆ.