ಕೇಂದ್ರದ ಲಸಿಕಾ ನೀತಿಯಿಂದ ಕಾಳಸಂತೆಗೆ ಉತ್ತೇಜನ: ಹೈಕೋರ್ಟ್ ನಲ್ಲಿ ಕೇರಳ ಸರಕಾರ ಆರೋಪ

ಕೊಚ್ಚಿ,ಜೂ.2: ಕೇಂದ್ರ ಸರಕಾರದ ಲಸಿಕಾ ನೀತಿಯು ಕಾಳಸಂತೆಗೆ ಕುಮ್ಮಕ್ಕು ನೀಡುತ್ತಿದೆ ಎಂದು ಕೇರಳ ಸರಕಾರ ಬುಧವಾರ ಹೈಕೋರ್ಟ್ ನಲ್ಲಿ ಪ್ರತಿಪಾದಿಸಿದೆ.
ರಾಜ್ಯದಲ್ಲಿ ಕೋವಿಡ್ ಲಸಿಕೆಗಳ ಕೊರತೆಗೆ ಸಂಬಂಧಿಸಿದ ಪ್ರಕರಣದ ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿಗಳಾದ ಎ. ಮುಹಮ್ಮದ್ ಮುಶ್ತಾಕ್ ಹಾಗೂ ಕೌಸರ್ ಎಡಪ್ಪಗತ್ ಅವರನ್ನೊಳಗೊಂಡ ನ್ಯಾಯಪೀಠದ ಮುಂದೆ ವಾದ ಮಂಡಿಸಿದ ಕೇರಳ ಸರಕಾರದ ಅಟಾರ್ನಿ ಜನರಲ್ ಅವರು ಲಸಿಕೆಗಳ ಖರೀದಿಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ಬೇರೆ ಬೇರೆ ದರಗಳನ್ನು ನಿಗದಿಪಡಿಸಿರುವುದನ್ನು ಪ್ರಶ್ನಿಸಿದರು.
ಉತ್ಪಾದನಾ ವೆಚ್ಚದ ಆಧಾರದಲ್ಲಿ ಲಸಿಕೆಗಳಿಗೆ ದರವನ್ನು ನಿಗದಿಪಡಿಸಬೇಕೆಂದು ಅಟಾರ್ನಿ ಜನರಲ್ ಪ್ರತಿಪಾದಿಸಿದರು.
ಖಾಸಗಿ ಲಸಿಕೆ ಉತ್ಪಾದಕ ಸಂಸ್ಥೆಗಳು ಲಸಿಕೆಗಳಿಗೆ ದುಬಾರಿ ದರಗಳನ್ನು ವಿಧಿಸುತ್ತಿದ್ದಾರೆಂದು ಅವರು ಆರೋಪಿಸಿದರು. ಸಾಂಕ್ರಾಮಿಕ ರೋಗದ ಹಾವಳಿಯ ನಡುವೆ ಖಾಸಗಿ ಕಂಪೆನಿಗಳಿಗೆ ಕಳ್ಳಾಟ ನಡೆಸುವುದಕ್ಕೆ ಅವಕಾಶ ನೀಡಬಾರದೆಂದು ಅವರು ಹೇಳಿದರು.
ಲಸಿಕೆ ಕಂಪೆನಿಗಳು ಲಸಿಕೆಗಳ ಕಾಳಸಂತೆ ಮಾರಾಟದಲ್ಲಿ ತೊಡಗುವುದಕ್ಕೆ ಹೇಗೆ ಅವಕಾಶ ನೀಡಲಾಯಿತೆಂದು ಅಟಾರ್ನಿ ಜನರಲ್ ಪ್ರಶ್ನಿಸಿದರು. ಲಸಿಕಾ ಕಂಪೆನಿಗಳಿಂದ ಖಾಸಗಿ ಆಸ್ಪತ್ರೆಗಳು ಖರೀದಿಸಿದ ದರದಲ್ಲಿಯೇ ಸರಕಾರ ಕೂಡಾ ಲಸಿಕೆಗಳನ್ನು ಖರೀದಿಸಲು ಸಾಧ್ಯವ್ಲಿವೆಂದು ರಾಜ್ಯ ಸರಕಾರ ನ್ಯಾಯಾಲಯಕ್ಕೆ ವಿವರಿಸಿತು. ಲಸಿಕೀಕರಣದಲ್ಲಿ ಏಕಸ್ವಾಮ್ಯವನ್ನು ಸಾಧಿಸಲು ಖಾಸಗಿ ಆಸ್ಪತ್ರೆಗಳಿಗೆ ಅವಕಾಶ ನೀಡಕೂಡದು ಎಂದು ಅವರು ಹೇಳಿದರು. ಕೇರಳ ಸರಕಾರದ ಹೇಳಿಕೆಯನ್ನು ದಾಖಲಿಸಿಕೊಂಡ ನ್ಯಾಯಾಲಯವನ್ನು ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಿದೆ.