ಉಚಿತ ಸಾರ್ವತ್ರಿಕ ಲಸಿಕೀಕರಣ: ಕೇಂದ್ರವನ್ನು ಆಗ್ರಹಿಸುವ ನಿರ್ಣಯಕ್ಕೆ ಕೇರಳ ವಿಧಾನಸಭೆ ಅನುಮೋದನೆ

ತಿರುವನಂತಪುರಂ, ಜೂ.2: ಎಲ್ಲಾ ರಾಜ್ಯಗಳಿಗೂ ಉಚಿತ ಲಸಿಕೆ ಒದಗಿಸಬೇಕು ಎಂದು ಕೇಂದ್ರ ಸರಕಾರವನ್ನು ಆಗ್ರಹಿಸುವ ನಿರ್ಣಯವನ್ನು ಕೇರಳ ವಿಧಾನಸಭೆ ಸರ್ವಾನುಮತದಿಂದ ಅನುಮೋದಿಸಿದೆ ಎಂದು ವರದಿಯಾಗಿದೆ.
ರಾಜಕೀಯ ಭಿನ್ನಾಭಿಪ್ರಾಯವನ್ನು ಬದಿಗಿರಿಸಿ ಆಡಳಿತಾರೂಢ ಸಿಪಿಐ(ಎಂ) ನೇತೃತ್ವದ ಎಲ್ಡಿಎಫ್ ಹಾಗೂ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಸರ್ವಾನುಮತದಿಂದ ನಿರ್ಣಯವನ್ನು ಬೆಂಬಲಿಸಿವೆ. ಆರೋಗ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ವೀಣಾ ಜಾರ್ಜ್ ನಿರ್ಣಯವನ್ನು ಮಂಡಿಸಿದ್ದರು. ಸಕಾಲದಲ್ಲಿ ಲಸಿಕೆ ಪೂರೈಸುವಂತೆಯೂ ನಿರ್ಣಯದಲ್ಲಿ ಆಗ್ರಹಿಸಲಾಗಿದೆ. ಕೊರೋನ ಸೋಂಕಿನ ವಿರುದ್ಧ ಹೋರಾಡಲು ನಮಗೆ, ಸಮಾಜದ ಎಲ್ಲಾ ವರ್ಗದವರನ್ನು ಸೋಂಕಿನಿಂದ ರಕ್ಷಿಸಲು ಉಚಿತ ಲಸಿಕೆಯ ಅಗತ್ಯವಿದೆ ಎಂದು ಸಚಿವೆ ಹೇಳಿದ್ದಾರೆ.
ಕೊರೋನ ಸೋಂಕಿನ ಪ್ರಥಮ ಅಲೆ ಆರ್ಥಿಕತೆಯನ್ನು ದುರ್ಬಲಗೊಳಿಸಿದ್ದು ದೇಶ ಈಗ ಸೋಂಕಿನ ಎರಡನೇ ಅಲೆಯನ್ನು ಎದುರಿಸುತ್ತಿದೆ. ಲಸಿಕೀಕರಣ ಪ್ರಕ್ರಿಯೆಯನ್ನು ತ್ವರಿತಗೊಳಿಸುವ ಕ್ರಮಗಳನ್ನು ಕೈಗೊಂಡರೆ ಇದರಿಂದ ಆರ್ಥಿಕತೆಗೂ ಪ್ರಯೋಜನವಾಗಲಿದೆ ಎಂದ ಅವರು, ಕೊರೋನ ಸೋಂಕಿನ ವಿರುದ್ಧದ ಹೋರಾಟದಲ್ಲಿ ಎಲ್ಲರೂ ಕೈಜೋಡಿಸಿ ಸಾರ್ವತ್ರಿಕ ಲಸಿಕೀಕರಣ ಪ್ರಕ್ರಿಯೆಯನ್ನು ಯಶಸ್ವಿಗೊಳಿಸಬೇಕು ಎಂದವರು ಹೇಳಿದ್ದಾರೆ.