ಪಂಚಾಯತ್ ರಾಜ್: ಹೆಚ್ಚುವರಿ ಹುದ್ದೆ ಸೃಷ್ಟಿಸಿ ರಾಜ್ಯ ಸರಕಾರ ಆದೇಶ

ಬೆಂಗಳೂರು, ಜೂ.3: ರಾಜ್ಯ ವ್ಯಾಪಿ ತಾಲೂಕು ಪಂಚಾಯತ್‍ಗಳಲ್ಲಿ ಪ್ರಸ್ತುತ ಅಸ್ತಿತ್ವದಲ್ಲಿರುವ ಒಂದು ಸಹಾಯಕ ನಿರ್ದೇಶಕ(ಗ್ರಾಮೀಣ ಉದ್ಯೋಗ) ಹುದ್ದೆಯ ಜೊತೆಗೆ 226 ತಾಲೂಕು ಪಂಚಾಯತ್‍ಗಳಿಗೆ ತಲಾ ಒಂದು ಹೆಚ್ಚುವರಿ ಸಹಾಯಕ ನಿರ್ದೇಶಕ(ಪಂಚಾಯತ್ ರಾಜ್) ಹುದ್ದೆಗಳಿಗೆ ಅನುಮೋದನೆ ನೀಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಇತ್ತೀಚಿನ ದಿನಗಳಲ್ಲಿ ಗ್ರಾಮ ಪಂಚಾಯತಿಗಳು ಹೆಚ್ಚೆಚ್ಚು ಅನುದಾನವನ್ನು ಪಡೆಯುತ್ತಿದ್ದು, ಕೇಂದ್ರ, ರಾಜ್ಯ ಮತ್ತು ಸ್ಥಳೀಯ ಸರಕಾರಗಳ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸುವ ಗುರುತರ ಜವಾಬ್ದಾರಿಯನ್ನು ಹೊಂದಿರುತ್ತವೆ.
ಪ್ರಸ್ತುತ ಅಭಿವೃದ್ಧಿ ಯೋಜನೆಗಳ ಮೇಲ್ವಿಚಾರಣೆಯು ನಿರೀಕ್ಷಿತ ಮಟ್ಟದಲ್ಲಿ ಇರುವುದಿಲ್ಲ. ಅಲ್ಲದೆ, ಗ್ರಾಮ ಪಂಚಾಯತಿಗಳ ಅಭಿವೃದ್ಧಿ ಯೋಜನೆಗಳ ತಯಾರಿಕೆ ಅನುಷ್ಠಾನ, 14 ಮತ್ತು 15ನೇ ಹಣಕಾಸು ಆಯೋಗದ ಅನುದಾನದ ಬಳಕೆ, ಗ್ರಾಮ ಪಂಚಾಯತಿ ತೆರಿಗೆ, ಸಂಗ್ರಹ, ಗ್ರಾಮ ಸಭೆಗಳ ನಿರ್ವಹಣೆ, ಗ್ರಾಮ ಪಂಚಾಯತ್ ಗಳ ಬಾಕಿ ವಿದ್ಯುತ್ ಬಿಲ್ಲುಗಳ ಪಾವತಿ, ಗ್ರಾಮ ಪಂಚಾಯತಿ ಮಟ್ಟದ ಆಸ್ತಿಗಳ ಅತಿಕ್ರಮಣ ತೆರವುಗೊಳಿಸುವುದು, ಸಂರಕ್ಷಣೆ ಮುಂತಾದ ಪಂಚಾಯತ್ ರಾಜ್ ಕಾರ್ಯಚಟುವಟಿಕೆಗಳ ಸೂಕ್ತ ಮೇಲ್ವಿಚಾರಣೆ ಹಾಗೂ ಕಾರ್ಯನಿರ್ವಾಹಕ ಅಧಿಕಾರಿಯ ಕಾರ್ಯ ನಿರ್ವಹಣೆಯಲ್ಲಿ ಸೂಕ್ತ ನೆರವು ನೀಡುವ ನಿಟ್ಟಿನಲ್ಲಿ ತಾಲ್ಲೂಕು ಪಂಚಾಯತ್ ಮಟ್ಟದಲ್ಲಿ ಇನ್ನೊಂದು ಸಹಾಯಕ ನಿರ್ದೇಶಕ ಹುದ್ದೆಯ ಅಗತ್ಯತೆ ಇತ್ತು.
ಅಲ್ಲದೆ, ರಾಜ್ಯದಲ್ಲಿ ಒಟ್ಟು 6021 ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹುದ್ದೆಗಳಿದ್ದು, ಕೇವಲ 227 ಸಹಾಯಕ ನಿರ್ದೇಶಕ ಹುದ್ದೆಗಳಿವೆ. ಪಂಚಾಯತ್ ಅಭಿವೃದ್ಧಿ ಅಧಿಕಾರಿ ವೃಂದದಿಂದ ಸಹಾಯಕ ನಿರ್ದೇಶಕ ವೃಂದಕ್ಕೆ ನೂರರಷ್ಟು ಮುಂಭಡ್ತಿ ಅವಕಾಶ ಕಲ್ಪಿಸಲಾಗಿದ್ದು, ಅದರಂತೆ ಕೇವಲ ಮೂರರಷ್ಟು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಮಾತ್ರ ಸಹಾಯಕ ನಿರ್ದೇಶಕ ವೃಂದಕ್ಕೆ ಪದೋನ್ನತಿ ಹೊಂದಬಹುದಾಗಿದೆ.
ಬಹಳಷ್ಟು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ತಮ್ಮ ಸೇವಾ ಅವಧಿಯಲ್ಲಿ ಯಾವುದೇ ಪದೋನ್ನತಿ ಇಲ್ಲದೆ ಸೇವೆಯಿಂದ ನಿವೃತ್ತಿ ಹೊಂದುವ ಸಂಭವವಿರುತ್ತದೆ. ಕಾರಣ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ವೃಂದದ ನೌಕರರ ಕಾರ್ಯ ಚೈತನ್ಯವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಸಹಾಯಕ ನಿರ್ದೇಶಕ ವೃಂದದ ಹುದ್ದೆಗಳನ್ನು ಹೆಚ್ಚಿಸುವ ಅಗತ್ಯವಿದೆ.
ಹಾಗಾಗಿ, ಪ್ರಸ್ತುತ ತಾಲೂಕು ಪಂಚಾಯಿತಿಗಳಲ್ಲಿ ಅಸ್ತಿತ್ವದಲ್ಲಿರುವ ಒಂದು ಸಹಾಯಕ ನಿರ್ದೇಶಕ (ಗ್ರಾಮೀಣ ಉದ್ಯೋಗ) ಹುದ್ದೆಯ ಜೊತೆಗೆ ಹೆಚ್ಚುವರಿಯಾಗಿ ಇನ್ನೊಂದು ಸಹಾಯಕ ನಿರ್ದೇಶಕ (ಪಂಚಾಯತ್ ರಾಜ್) ಹುದ್ದೆಯನ್ನು ಸೃಷ್ಟಿಸುವುದು ಅತ್ಯಗತ್ಯವೆಂದು ಮನಗಂಡು ಈ ಆದೇಶ ಹೊರಡಿಸಲಾಗಿದೆ.







